ರಾಜ್ಯ
Trending

ಸರ್ಕಾರದ ವಿರುದ್ದ ಮತ್ತೆ ಸಮರ ಸಾರಿದ ಸಾರಿಗೆ ನೌಕರರು

ಬೆಂಗಳೂರು: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿ, ನಂತರ ಸರ್ಕಾರದ ಭರವಸೆಯಿಂದ ತೃಪ್ತರಾಗಿ ಹೋರಾಟದಿಂದ ಹಿಂದೆ ಸರಿದಿದ್ದ ಸಾರಿಗೆ ನೌಕರರು (Transport Employees) ಇದೀಗ ಮತ್ತೆ ಸಿಡಿದೇಳುವ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಮಾತುಕತೆಯನ್ನೂ ನಡೆಸಿಲ್ಲ ಎಂದು ಆರೋಪಿಸಿರುವ ಅವರು, ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.ಏಪ್ರಿಲ್ 15 ರಂದು ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಧರಣಿ ಸತ್ಯಾಗ್ರಹದ ನಡೆಸಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿಸೆಂಬರ್ 31 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದರು. ಆ ಸಂದರ್ಭದಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ‌ ಸಿಎಂ, ಮುಷ್ಕರ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಅಲ್ಲದೆ, ಸಂಕ್ರಾಂತಿ ನಂತ್ರ ನೌಕರರ ಸಂಘಟನೆ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ನೌಕರರ ಜೊತೆ ಮಾತುಕತೆ ನಡೆಸುವುದು ಮಾತ್ರವಲ್ಲದೆ, ಪ್ರಯಾಣ ದರ ಏರಿಕೆ ಷರತ್ತನ್ನೂ ಹಾಕಲಾಗಿತ್ತು. ಅದರಂತೆ, ನಿಗಮವು ಈಗಾಗಲೇ‌ ಟಿಕೆಟ್ ದರ ಏರಿಕೆ‌ ಮಾಡಿದೆ. ಆದರೆ, ನೌಕರರನ್ನು ಮಾತ್ರ 2 ತಿಂಗಳು ಕಳೆದರೂ ಮಾತುಕತೆಗೆ ಕರೆದಿಲ್ಲ. ಇದರಿಂದಾಗಿ ಸಾರಿಗೆ ನೌಕರರ ಸಂಘಟನೆಗಳು ಸಿಎಂ ವಿರುದ್ಧ ಕೆರಳಿವೆ. ಏಪ್ರಿಲ್ 15 ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸುವ ಸುಳಿವು ನೀಡಿವೆ.

ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ನೀಡಬೇಕು (7 ನೇ ವೇತನ ಆಯೋಗ ಜಾರಿಯಾಗಬೇಕು), 38 ತಿಂಗಳ ವೇತನ ಹಿಂಬಾಕಿ ನೀಡಬೇಕು, ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಬೇಕು ಹಾಗೂ 2021 ರ ವೇಳೆಯಲ್ಲಿ ಮುಷ್ಕರದ ವಜಾಗೊಂಡ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದೂ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಆಗ್ರಹಿಸಿದ್ದರು.

ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಬಹುದು ಎಂದು ಕಾರ್ಯಪ್ರವೃತ್ತರಾಗಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸಿಎಂ ಸಿದ್ದರಾಮಯ್ಯ ನೌಕರರ ಜತೆ ಮಾತುಕತೆ ನಡೆಸಿದ್ದರು. ಜತೆಗೆ, ಸಂಕ್ರಾಂತಿ ನಂತರ ಮಾತುಕತೆ ನಡೆಸಿ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

Related Articles

Leave a Reply

Your email address will not be published. Required fields are marked *

Back to top button