ರಾಜ್ಯ
Trending

ಮದ್ರಸಾ ಪ್ರಾರಂಭಕ್ಕೆ ಕೋರ್ಟ್ ಅನುಮತಿ ನೀಡುವ ಭರವಸೆ ಇದೆ:ಕೆ.ಸಿ.ಶೌಕತ್ ಪಾಷ

ಮೈಸೂರು: ನಗರದ ಕ್ಯಾತಮಾರನಹಳ್ಳಿ ಬಡಾವಣೆಯಲ್ಲಿರುವ ಹಲೀಮಾ ಸಾದಿಯಾ ಎಜುಕೇಷನಲ್ ಟ್ರಸ್ಟ್‌ನ ಮದರಸಾ ಪುನರಾರಂಭಕ್ಕೆ ಉಚ್ಛ ನ್ಯಾಯಾಲಯ ಅನುಮತಿ ನೀಡುವ ಭರವಸೆ ಇದೆ ಎಂದು ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಸಿ.ಶೌಕತ್ ಪಾಷ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕೆಯೊಂದಿಗೆ ಅವರು ಮಾತನಾಡಿ, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕ್ಯಾತಮಾರನಹಳ್ಳಿ ಮದ್ರಸಾಕ್ಕೆ ಸಂಬಂಧಿಸಿದಂತೆ ಅಂತಿಮ ಸಭೆ ನಡೆಯಿತು. ಸಭೆಯಲ್ಲಿ ಮತ್ತೊಮ್ಮೆ ಪರ-ವಿರೋಧ ವ್ಯಕ್ತವಾಯಿತು.

ಕಳೆದ ಮಾರ್ಚ್ 14 ರಂದು ಬಡಾವಣೆಯ ಎರಡೂ ಕೋಮಿನ ಮುಖಂಡರ ಸಭೆಯಲ್ಲೂ ಇದೇ ರೀತಿ ಪರ-ವಿರೋಧ ವ್ಯಕ್ತವಾಗಿತ್ತು. ನಾವು ಮದರಸಾ ಪ್ರಾರಂಭದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ. ನಾವು ಹಿಂದೂ ಮುಸಲ್ಮಾನರು ಸ್ಥಳೀಯವಾಗಿ ಸಹೋದರರಂತೆ ಇದ್ದೇವೆ, ಅನಗತ್ಯ ವ್ಯಕ್ತಿಗಳು ಪದೇ ಪದೇ ಬಂದು ಇಲ್ಲಿನ ಸೌಹಾರ್ಧ ವಾತಾವರಣ ಕೆಡಿಸುತ್ತಿದ್ದಾರೆ. ಮೊದಲು ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿದ್ದೆವು, ಇಂದು ಮಂಗಳವಾರ ನಡೆದ ಸಭೆಯಲ್ಲೂ ಮದ್ರಸಾ ಪ್ರಾರಂಭ ಬೇಡ ಎಂದು ಕೆಲವರು ಮುಖಂಡರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರೆ, ಮುಸ್ಲಿಂ ಮುಖಂಡರು ಮದ್ರಸಾ ಪ್ರಾರಂಭಿಸುವುದು ನಮ್ಮ ಸಂವಿಧಾನಾತ್ಮಕ ಹಕ್ಕು ದಯಮಾಡಿ ಅನುಮತಿ ನೀಡಿ ಎಂದು ಕೋರಿದೆವು ಎಂದು ಶೌಕತ್ ಪಾಷ ಹೇಳಿದರು.

ಇದು ಮಸೀದಿ ಅಲ್ಲ, ಕೇವಲ ಮದ್ರಸಾ ಆಗಿದೆ. ಮಕ್ಕಳು ಇಲ್ಲಿ ಉರ್ದು, ಅರಬ್ಬಿ ಮತ್ತು ಕುರಾನ್ ಕಂಠಪಾಠ ಮಾಡಲು ಬರುತ್ತಾರೆ. ಒಂದು ಟ್ರಸ್ಟ್ ಮೂಲಕ ಇದರ ನಿರ್ವಹಣೆ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಮದ್ರಸಾ ಬಂದ್ ಆಗಿರುವ ಕಾರಣ ಮಕ್ಕಳಿಗೆ ಅನಾನುಕೂಲ ಆಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಇದನ್ನು ಪ್ರಾರಂಭಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದೆವು ಎಂದರು.

ಮತ್ತೊಮ್ಮೆ ಎರಡೂ ಪಕ್ಷದವರನ್ನು ಪ್ರತ್ಯೇಕವಾಗಿ ಕರೆದು ಜಿಲ್ಲಾಧಿಕಾರಿಗಳು ಅಹವಾಲುಗಳನ್ನು ಆಲಿಸಿದ್ದಾರೆ. ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿಯೂ ಹೇಳಿದ್ದಾರೆ ಎಂದರು.

ಏನಿದು ಘಟನೆ : 2006 ರಲ್ಲಿ ಕ್ಯಾತಮಾರನಹಳ್ಳಿ ಬಡಾವಣೆಯಲ್ಲಿ ಹಲೀಮಾ ಸಾದಿಯಾ ಎಜುಕೇಷನಲ್ ಟ್ರಸ್ಟ್‌ನಿಂದ ಅರಬ್ಬಿ ಮದರಸಾ ಪ್ರಾರಂಭಿಸಲಾಗಿತ್ತು. ಹಲವಾರು ಮಕ್ಕಳು ಇಲ್ಲಿ ಕಲಿಯಲು ಬರುತ್ತಿದ್ದರು.

2009 ರಲ್ಲಿ ಕೆಲವು ದುಷ್ಕರ್ಮಿಗಳು ಇಲ್ಲಿ ಶಾಂತಿ ಕದಡಲು ಹಂದಿ ತಲೆಯನ್ನು ಕಡಿದು ತಂದು ಈ ಮದರಸಾದಲ್ಲಿ ಹಾಕಿದ್ದರು. ನಂತರ ಈ ಭಾಗದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಮದರಸಾ ಬಂದ್ ಮಾಡಲಾಗಿತ್ತು. ಆ ನಂತರ ಪುನಃ 2010 ರಲ್ಲಿ ಮದರಸಾ ಪ್ರಾರಂಭಿಸಲಾಗಿತ್ತು. 2016 ರಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಹತ್ಯೆಯ ನಂತರ ಮದರಸಾಕ್ಕೆ ಪುನಃ ಬೀಗ ಜಡಿಯಲಾಗಿತ್ತು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶಿವಕುಮಾರ್, ನಾರಾಯಣ, ಹುಲಿಯಮ್ಮ ದೇವಾಲಯದ ಸದಸ್ಯರು,ಹಲೀಮಾ ಸಾದಿಯಾ, ಅನ್ಸಾರಿ ಖತೀಬ್, ಅಕ್ಬರ್ ಪಾಷ, ಅಯ್ಯೂಬ್, ಮೌಲಾನ ಅನ್ಸಾರಿ ಸಾಹೇಬ್, ಅಕ್ಬರ್ ಷರೀಫ್ ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button