ಇತ್ತೀಚಿನ ಸುದ್ದಿದೇಶ

ಕುಂಭಮೇಳಕ್ಕೆ ತೆರಳುತ್ತಿದ್ದ 10 ಜನ ಭಕ್ತರು ಸ್ಥಳದಲ್ಲೇ ದುರ್ಮರಣ.

ಹಿಂದೂಗಳ ಪವಿತ್ರ ಆಚರಣೆಯೆಂದು ಪರಿಗಣಿಸಲ್ಪಡುವ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭವು ಜನವರಿ 13ರಂದು ಪ್ರಾರಂಭವಾಗಿದ್ದು, ಫೆಬ್ರವರಿ 26ರವರೆಗೆ ನಡೆಯಲಿದ್ದು, ದೇಶದ ಮೂಲೆ ಮೂಲೆಗಳಿಂದ ಜನರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಇದರ ಮಧ್ಯ ಕೆಲ ಅಹಿತಕರ ಘಟನೆಗಳು ಸಹ ನಡೆದಿವೆ. ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10 ಜನ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಾ ಕುಂಭಮೇಳಕ್ಕೆ (Maha Kumbh Mela) ತೆರಳುತ್ತಿದ್ದ ಬಸ್ ಹಾಗೂ ಬೊಲೆರೊ ವಾಹನ ಮುಖಾಮುಖಿ ಡಿಕ್ಕಿಯಾಗಿ 10 ಜನ ಭಕ್ತರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ-ಪ್ರಯಾಗರಾಜ್ ಹೆದ್ದಾರಿಯಲ್ಲಿ ನಡೆದಿದೆ. ಬೊಲೆರೊ ವಾಹನದಲ್ಲಿದ್ದ 10 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, 19 ಜನ ಗಾಯಗೊಂಡಿದ್ದಾರೆ. ಮೃತರು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಮೂಲದವರು ಎಂದು ತಿಳಿದುಬಂದಿದ್ದು, ಇವರು ಕುಂಭಮೇಳಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಸ್ನಾನ ಮಾಡಲು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಿಂದ ಭಕ್ತರು ಪ್ರಯಾಣಿಸುತ್ತಿದ್ದರು. ಭಕ್ತರನ್ನು ಕರೆದೊಯ್ಯುತ್ತಿದ್ದ ಬೊಲೆರೊ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಿಂದ ಪ್ರಯಾಣಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಇನ್ನು ಈ ದುರ್ಘಟನೆ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ಪಡೆದುಕೊಂಡಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ವಾರದ ಆರಂಭದಲ್ಲಿ, ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಮಹಾಕುಂಭದಿಂದ ಹಿಂತಿರುಗುತ್ತಿದ್ದ ಆಂಧ್ರಪ್ರದೇಶದ ಯಾತ್ರಿಕರು ಪ್ರಯಾಣಿಸುತ್ತಿದ್ದ ಮಿನಿ ಬಸ್‌, ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 7 ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಇನ್ನು ಜನವರಿ 29 ರಂದು ಮಹಾಕುಂಭಮೇಳ ಸ್ಥಳದಲ್ಲಿ ಬೆಳಗಿನ ಜಾವ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.ಮಹಾಕುಂಭದಲ್ಲಿ ಈವರೆಗೆ 50 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಮಹಾಕುಂಭದಲ್ಲಿ ಮೊದಲ ಮೂರು ಶಾಹಿ ಸ್ನಾನ ಮತ್ತು ನಂತರ ಮಾಘ ಪೂರ್ಣಿಮೆಯ ಸ್ನಾನದಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ಕೋಟ್ಯಂತರ ಸಂಖ್ಯೆಯಲ್ಲಿ ಬಂದ ಭಕ್ತರು ಪ್ರಯಾಗ್‌ರಾಜ್ ನಗರದ ಜನಸಂಖ್ಯೆಯನ್ನು ವಿಶ್ವದ ಎರಡು ದೊಡ್ಡ ದೇಶಗಳ ನಂತರ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಒಂದೂವರೆ ತಿಂಗಳಲ್ಲಿ ಪ್ರಯಾಗ್‌ರಾಜ್‌ಗೆ ಬಂದ ಒಟ್ಟು ಜನರ ಸಂಖ್ಯೆ ಅಮೆರಿಕದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ದಾಖಲೆಯ ಪ್ರಕಾರ, ಮಹಾಕುಂಭ 2025ರಂತಹ ಯಾವುದೇ ಕಾರ್ಯಕ್ರಮ ಇಲ್ಲಿಯವರೆಗೆ ಜಗತ್ತಿನಲ್ಲಿ ನಡೆದಿಲ್ಲ.



Related Articles

Leave a Reply

Your email address will not be published. Required fields are marked *

Back to top button