ಟಿಪ್ಪರ್ ಲಾರಿ ಹರಿದು ವ್ಯಕ್ತಿಯೋರ್ವನ ದಾರುಣ ಸಾವು
ಕೆ.ಎಂ.ದೊಡ್ಡಿ :-
ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಟಿಪ್ಪರ್ ಹಿಂಬದಿ ಚಕ್ರಕ್ಕೆ ಸಿಲುಕಿ ರೈತನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಭಾರತಿನಗರ ಸಮೀಪದ ಕರಡಕೆರೆ ಗ್ರಾಮದಲ್ಲಿ ನಡೆದಿದೆ.
ಕರಡಕೆರೆ ಗ್ರಾಮದ ರೈತ ಸಂಘದ ಕಾರ್ಯಕರ್ತ ನಿಂಗೇಗೌಡ (೬೦) ಸ್ಥಳದಲ್ಲಿಯೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಕರಡಕೆರೆ ಗ್ರಾಮದ ರಸ್ತೆ ಕಾಮಗಾರಿಗೆ ಟಿಪ್ಪರ್‌ವೊಂದರಲ್ಲಿ ಜಲ್ಲಿ ತುಂಬಿಕೊಂಡು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಜೆಲ್ಲಿ ತೆರವುಗೊಳಿಸುವ ವೇಳೆ ಹಿಂಬದಿಗೆ ರಿವರ್ಸ್ ತೆಗೆಯುತ್ತಿದ್ದಾಗ ಟಿವಿಎಸ್ ಸ್ಕೂಟರ್‌ನಲ್ಲಿ ಜಾನುವಾರಗಳಿಗೆ ತಂದಿದ್ದ ಮೇವು ಇಳುಸುತಿದ್ದ ವ್ಯಕ್ತಿಯ ಮೇಲೆ ಹಿಂಬದಿ ಚಕ್ರ ಹರಿದ ಪರಿಣಾಮ ಸ್ಥಳದಲ್ಲಿ ಸಾವು ಸಂಭವಿಸಿದ್ದು, ಮೃತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಗ್ರಾಮಸ್ಥರ ಪ್ರತಿಭಟನೆ :-
ಟಿಪ್ಪರ್ ಚಲಾಯಿಸುತ್ತಿದ್ದ ಚಾಲಕನ ನಿರ್ಲಕ್ಷ್ಯತನದಿಂದ ರೈತ ಜೀವ ಬಲಿ ಪಡಿದ್ದಾನೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು ಹಾಗೂ ಕೂಡಲೇ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿ ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಶವಗಾರಕ್ಕೆ ಶವ ಸಾಗಿಸಲು ಬಿಡದೇ ಪಟ್ಟು ಹಿಡಿದು ಸ್ಥಳದಲ್ಲಿ ಬಿಗಿಯಾದ ವಾತಾವರಣ ನಿರ್ಮಾಣವಾಯಿತು.
ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ವೃತ್ತ ನಿರೀಕ್ಷಕರಳಾದ ಶಿವಕುಮಾರ್, ವೆಂಕಟೇಗೌಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯನ್ನು ತಿಳಿಗೊಳಿಸಿ ಗುತ್ತಿಗೆದಾರನ್ನು ಕರೆಸುವುದಾಗಿ ಗ್ರಾಮದ ಮುಖಂಡ ಕರಡಕೆರೆ ಹನುಮಂತೇಗೌಡ ಅವರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಪ್ರತಿಭಟನೆ ತಿಳಿಗೊಳಿಸಿದರು.
ಬಳಿಕ ಗುತ್ತಿಗೆ ಕಂಪನಿಯವರು ಆಗಮಿಸಿ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು ಪರಿಹಾರ ನೀಡುವುದಾಗಿ ಗ್ರಾಮಸ್ಥರ ಬಳಿ ಭರವಸೆ ನೀಡಿದ ನಂತರ ರಸ್ತೆಯಲ್ಲಿದ್ದ ಶವವನ್ನು ಪಂಚನಾಮೆ ಮಾಡಿಸಲು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಯಿತು.
ಈ ವೇಳೆ ಸ್ಥಳಕ್ಕೆ ಅಗಮಸಿದ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ದೇವರಾಜುರವರು ಪರಿಶೀಲನೆ ನಡೆಸಿದರು. ಭಾರತೀನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.