ಇತ್ತೀಚಿನ ಸುದ್ದಿರಾಜ್ಯ

ಕೇಂದ್ರದ ಅನ್ಯಾಯ ಪ್ರಶ್ನಿಸಲು ಬೊಮ್ಮಾಯಿಗೆ ಬಾಯಿಯೇ ಬರಲ್ಲ, ಅಶೋಕ್​ಗೆ ಗೊತ್ತೇ ಇಲ್ಲ: ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು, ಫೆಬ್ರವರಿ 5: ‘ಕೇಂದ್ರ ಸರ್ಕಾರವು ಕರ್ನಾಟಕದ ಪಾಲಿನ ಹಣವನ್ನು ನೀಡದೆ ಅನ್ಯಾಯ ಎಸಗುತ್ತಿದೆ. ಆದರೆ, ಇದನ್ನು ಪ್ರಶ್ನಿಸಲು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರಿಗೆ ಬಾಯಿಯೇ ಬರುತ್ತಿಲ್ಲ. ಬಿಎಸ್​ ಯಡಿಯೂರಪ್ಪ ಅವರಿಗೂ ಬಾಯಿ ಬರಲ್ಲ’ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅನುದಾನ ನೀಡುವ ವಿಚಾರದಲ್ಲಿ ಕೇಂದ್ರದಿಂದ ಸಾಕಷ್ಟು ಅನ್ಯಾಯವಾಗುತ್ತಿದೆ. ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದರು.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಈ ಬಗ್ಗೆ ತುಟಿಬಿಚ್ಚಿಲ್ಲ. ಹೀಗಾಗಿ ದೇಶದ ಗಮನ ಸೆಳೆಯಲು ನಾಡಿದ್ದು ಪ್ರತಿಭಟನೆ ನಡೆಸುತ್ತಿದ್ದೇವೆ. ಫೆಬ್ರವರಿ 7ರಂದು ನಡೆಯುವ ಪ್ರತಿಭಟನೆಗೆ ಎಲ್ಲರೂ ಸಹಕರಿಸಿ ಎಂದು ಮುಖ್ಯಮಂತ್ರಿಗಳು ಸಚಿವರು, ಶಾಸಕರಿಗೆ ಮನವಿ ಮಾಡಿದರು.

ಉತ್ತರದ ರಾಜ್ಯಗಳಿಗೆ ಅನುದಾನ ಕೊಡಿ, ಬೇಡವೆನ್ನುವುದಿಲ್ಲ. ಆದರೆ ದಕ್ಷಿಣದ ರಾಜ್ಯಗಳ ಕಡೆ ಗಮನಹರಿಸಿ. ರಾಜ್ಯದಿಂದ ಜೋಶಿ, ಶೋಭಾ, ಭಗವಂತ ಖೂಬಾ ಕೇಂದ್ರ ಮಂತ್ರಿಗಳಾಗಿದ್ದಾರೆ. ಒಂದು ದಿನವೂ ಅವರು ಬಾಯಿ‌ಬಿಡಲಿಲ್ಲ. ಸಂಸತ್‌ನಲ್ಲಿ ಇದರ ಬಗ್ಗೆ ಅವರು ಮಾತನಾಡಿದ್ದಾರಾ? ಇದೆಲ್ಲ ರಾಜ್ಯಕ್ಕೆ ಅನ್ಯಾಯ ಅಲ್ವೇ? ಜನ ಇವರನ್ನು ಆಶೀರ್ವಾದ ಮಾಡಿ ಕಳಿಹಿಸಿಲ್ಲವೇ? ಹಣಕಾಸು ಸಚಿವರು ನಮ್ಮ ರಾಜ್ಯದಿಂದಲೇ ಕೇಂದ್ರಕ್ಕೆ ಹೋಗಿದ್ದಾರೆ. ಅವರೇ ರಾಜ್ಯಕ್ಕೆ ಅನ್ಯಾಯ ಮಾಡಿದರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿ ನಾಯಕರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಕೇಂದ್ರ ಸಚಿವ ಅಮಿತ್ ಶಾ ಅವರ ಬಳಿ ಮಾತನಾಡಿ, ಪ್ರಧಾನಿಯವರ ಬಳಿ ಮಾತನಾಡಿರಪ್ಪಾ, ಸಂಸತ್​​ನಲ್ಲಿ ಮಾತನಾಡಿ. ಇಲ್ಲಿ ಸುಳ್ಳು ಹೇಳಿಕೊಂಡು ಯಾಕೆ ಇರುತ್ತೀರಿ. ಅಲ್ಲಿಗೆ‌ಹೋಗಿ ಕೇಳಿ, ಮಾಡಿಸಿ ಎಂದು ಲೇವಡಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button