ಬೆಂಗಳೂರು ಟ್ರಾಫೀಕ್ ಪರಿಹಾರಕ್ಕೆ ಬಿಬಿಎಂಪಿ ಮೆಗಾ ಪ್ಲಾನ್…

ಬೆಂಗಳೂರು ದಲ್ಲಿ 13,140 ಕೋಟಿ ರೂ. ವೆಚ್ಚದಲ್ಲಿ 16 ಮೇಲ್ಸೇತುವೆ ಮತ್ತು ಅಂಡರ್‌ಪಾಸ್, ಸುರಂಗ ಮಾರ್ಗಗಳ ನಿರ್ಮಾಣದ ಯೋಜನೆ ಹಾಕಲಾಗಿದೆ. ಮುಂಬರುವ ರಾಜ್ಯ ಬಜೆಟ್ ನಲ್ಲಿ ಇದಕ್ಕೆ ಅನುದಾನ ನಿರೀಕ್ಷಿಸಲಾಗಿದೆ. ನಗರದಲ್ಲಿ 1 ಕೋಟಿಗೂ ಹೆಚ್ಚು ವಾಹನಗಳಿದ್ದು, ಪೀಕ್ ಸಮಯದಲ್ಲಿ 10 ಕಿ.ಮೀ ಸಾಗಲು 1 ಗಂಟೆ ಸಮಯ ಬೇಕಾಗಿದೆ.ವಾಹನ ಸವಾರರು ದಿನದ ಬಹುಪಾಲು ಸಮಯವನ್ನು ರಸ್ತೆಗಳಲ್ಲೇ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.ರಾಜಧಾನಿಯಲ್ಲಿ ಹದಗೆಟ್ಟಿರುವ ಸಂಚಾರ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹೆಣಗಾಡುತ್ತಲೇ ಇರುವ ಬಿಬಿಎಂಪಿಯು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 16 ಮೇಲ್ಸೇತುವೆಗಳ ನಿರ್ಮಾಣಕ್ಕೆ ಮುಂದಡಿ ಇಟ್ಟಿದೆ. ಇದಕ್ಕೆ 13,140 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.ಹದಗೆಟ್ಟ ಸಂಚಾರ ವ್ಯವಸ್ಥೆಯಲ್ಲಿ ಬೆಂಗಳೂರು ಮಹಾನಗರವು ಏಷ್ಯಾ ಖಂಡದ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಪ್ರತಿ 10 ಕಿ.ಮೀ ಪ್ರಯಾಣಕ್ಕೆ ಸರಾಸರಿ 28 ನಿಮಿಷ, 10 ಸೆಕೆಂಡ್ ಸಮಯ ಬೇಕಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ(ಪೀಕ್ ಅವರ್) ಗಂಟೆಗೆ 10 ಕಿ.ಮೀ ದೂರ ಕ್ರಮಿಸಲಷ್ಟೇ ಸಾಧ್ಯವಾಗುತ್ತಿದ್ದು, ವಾಹನ ಸವಾರರು ದಿನದ ಬಹುಪಾಲು ಸಮಯವನ್ನು ರಸ್ತೆಗಳಲ್ಲೇ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.ದಶ ದಿಕ್ಕುಗಳಿಗೆ ಮೆಟ್ರೊ ಜಾಲ ವಿಸ್ತರಿಸಿ, ಅಂಡರ್‌ಪಾಸ್, ಮೇಲ್ಸೇತುವೆಗಳ ನಿರ್ಮಾಣ ಮಾಡಿದ್ದರೂ ದಟ್ಟಣೆ ಸಮಸ್ಯೆ ಮಾತ್ರ ತಗ್ಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ರಸ್ತೆಗಳಿಗಿಳಿಯುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ನಗರದಲ್ಲಿನ ವಾಹನಗಳ ಸಂಖ್ಯೆ ಒಂದು ಕೋಟಿ ದಾಟಿದ್ದು, ನಿತ್ಯ ಹೊಸದಾಗಿ 1600 ವಾಹನಗಳು ನೋಂದಣಿಯಾಗುತ್ತಿವೆ. ಕಳೆದ ಎರಡು ದಶಕಗಳಲ್ಲಿ ವಾಹನ ದಟ್ಟಣೆಯು ಮಹಾನಗರದಲ್ಲಿ ಶೇ. 240ರಷ್ಟು ಜಾಸ್ತಿಯಾಗಿದೆ.ಟ್ರಾಫಿಕ್‌ಜಾಮ್‌ನಿಂದ ಕುಖ್ಯಾತಿ ಪಡೆದಿರುವ ರಾಜಧಾನಿಯಲ್ಲಿ ವಾಹನ ಸಂಚಾರ ಸುಗಮಗೊಳಿಸಲು ‘ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ ಯೋಜನೆ’ ರೂಪಿಸಲಾಗಿದೆ. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಸುರಂಗ ರಸ್ತೆ, ಹೊಸ ಮೆಟ್ರೊ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಸೇರಿದಂತೆ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳ ನಿರ್ಮಾಣ ಸಂಬಂಧ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಲಾಗಿದೆ.ಹೊಸದಿಲ್ಲಿ ಮೂಲದ ಆಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಕಾರ್ಯ ಸಾಧ್ಯತಾ ವರದಿ ತಯಾರಿಸಿದ್ದು, ಇದನ್ನು ಕಳೆದ ಡಿಸೆಂಬರ್‌ನಲ್ಲೇ ಬಿಬಿಎಂಪಿಗೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು 16 ಮೇಲ್ಸೇತುವೆ, ಅಂಡರ್‌ಪಾಸ್‌ಗಳ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಗೆ ಟೆಂಡರ್ ಆಹ್ವಾನಿಸಿದೆ.