ಯಶಸ್ವಿ ಜಾಣನ ಯಶಸ್ವೀ ರಂಗಪ್ರವೇಶ
ಬೆಂಗಳೂರಿನ ಪ್ರಖ್ಯಾತ ‘ವೈಷ್ಣವಿ ನಾಟ್ಯಶಾಲೆ’ಯ ಅಂತರರಾಷ್ಟ್ರೀಯ ನೃತ್ಯಪಟು-ನಾಟ್ಯಾಚಾರ್ಯ ವಿದ್ವಾನ್ ಮಿಥುನ್ ಶ್ಯಾಂ ಅವರ ಶಿಷ್ಯ ಉತ್ತಮ ನೃತ್ಯಕಲಾವಿದ ಯಶಸ್ವಿ ಜಾಣ ಇತ್ತೀಚೆಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ತನ್ನ ಅಂಗಶುದ್ಧ ಲವಲವಿಕೆಯ ನೃತ್ಯದೈಸಿರಿಯಿಂದ ನೆರೆದ ರಸಿಕರೆಲ್ಲರ ಮನಸೆಳೆದು ‘ಭೇಷ್ ಜಾಣ ಕಲಾವಿದ’ ಎಂಬ ಮೆಚ್ಚುಗೆಗೆ ಪಾತ್ರನಾದ.
ಬಹುಮುಖ ಪ್ರತಿಭೆಯ ಯಶಸ್ವಿ , ಅಂದು ಪ್ರಸ್ತುತಪಡಿಸಿದ ಕೃತಿಗಳೆಲ್ಲವೂ ಅತ್ಯಂತ ವಿಶಿಷ್ಟವಾಗಿದ್ದವು ಹಾಗೂ ಅವನ ಪರಿಶ್ರಮ-ಬದ್ಧತೆಯ ನೃತ್ಯಾಭ್ಯಾಸಕ್ಕೆ ಹಿಡಿದ ಕನ್ನಡಿಯಾಗಿತ್ತು. ಅಂದಿನ ಸಮಾರಭದಲ್ಲಿ ಮುಖ್ಯ ಅತಿಥಿಗಳಾಗಿ ನೃತ್ಯ ವಿದ್ವಾಂಸೆ-ಡಾ. ಚೂಡಾಮಣಿ ನಂದಗೋಪಾಲ್, ಲೇಖಕಿ- ವೈ.ಕೆ.ಸಂಧ್ಯಾ ಶರ್ಮ ಮತ್ತು ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸುಬ್ರಮಣ್ಯ ಅವರು ಆಗಮಿಸಿದ್ದರು. ಆ ಸಂದರ್ಭದಲ್ಲಿ ಗುರು ಮಿಥುನ್ ಶ್ಯಾಂ, ಶಿಷ್ಯ ಯಶಸ್ವಿಗೆ ಪ್ರಮಾಣ ಪತ್ರ ಮತ್ತು ವೈಷ್ಣವಿ ರತ್ನ ಎಂಬ ಬಿರುದನ್ನು ಪ್ರದಾನಿಸಿದರು. ಯಶಸ್ವಿಯ ತಾಯಿ ವಿದ್ಯಾ ಮತ್ತು ತಂದೆ ಡಾ. ಪ್ರದೀಪ್ ಜಾಣ ಉಪಸ್ಥಿತರಿದ್ದರು.