
ಮಂಡ್ಯ : ಹನ್ನೆರಡನೇ ಶತಮಾನದಲ್ಲಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ ಜಗಜ್ಯೋತಿ ಬಸವಣ್ಣನವರ ಹಾದಿಯಲ್ಲೇ ಸಾಗಿ ಬಂದ ಪರಮಪೂಜ್ಯ ಸಿದ್ದಗಂಗಾಶ್ರೀಗಳು 21ನೇ ಶತಮಾನದಲ್ಲಿ ಮತ್ತೆ ಕಲ್ಯಾಣದ ಕ್ರಾಂತಿಯನ್ನು ಮಾಡಿದ ಮಹಾನ್ ಚೇತನ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಬಣ್ಣಿಸಿದರು.ನಗರದ ಸ್ವರ್ಣಸಂದ್ರ ಬಡಾವಣೆಯ ಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಉದ್ಯಾನವನದಲ್ಲಿ ಹುಣ್ಣಿಮೆಯ ಅಂಗವಾಗಿ ಮದ್ದೂರು ತಾಲ್ಲೂಕು ಅರ್ಚಕರ ಸಂಘದ ಪದಾಧಿಕಾರಿಗಳು ಆಯೋಜಿಸಿದ್ದ `ದಾಸೋಹ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
111ವರ್ಷಗಳ ಕಾಲ ರಾಷ್ಟçದ ಪ್ರಗತಿಗೆ ಶೈಕ್ಷಣಿಕ ಕ್ರಾಂತಿಯ ಮೂಲಕ ಭದ್ರ ಬುನಾದಿ ಹಾಕಿದ ಸ್ವಾಮೀಜಿಯವರ ದೂರದೃಷ್ಟಿತ್ವದ ಫಲದಿಂದಾಗಿ ಕೋಟ್ಯಾಂತರ ಮಂದಿ ವಿದ್ಯಾರ್ಥಿಗಳು ಶ್ರೀಮಠದಲ್ಲಿ ಅನ್ನ, ಅರಿವು ಆಸರೆಯಂತಹ ತ್ರಿವಿಧ ದಾಸೋಹವನ್ನು ಪಡೆದು ಸದೃಢ ಸಮಾಜ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ದೇಶದ ಎಲ್ಲಾ ಮಠಾಧಿಪತಿಗಳಿಗೂ ಪರಮಪೂಜ್ಯರು ಆದರ್ಶಪ್ರಾಯವಾಗಿದ್ದಾರೆ ಎಂದರು.ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್‌ಬೆಟ್ಟಹಳ್ಳಿ ಮಾತನಾಡಿ, ಸಿದ್ಧಗಂಗಾ ಕ್ಷೇತ್ರ ಎಂದರೆ ದಾಸೋಹ ಎನ್ನುವ ಭಾವನೆ ಮೂಡುತ್ತದೆ. ಯಾವುದೇ ಜಾತಿ, ಧರ್ಮ, ವರ್ಣ, ವರ್ಗ ಬೇಧವಿಲ್ಲದೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಾ ಬಂದಿರುವ ಶ್ರೀಮಠದ ಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು ಎಂದರು.
ಬಡತನ ಹಾಗೂ ಶಿಕ್ಷಣದ ಮಹತ್ವವನ್ನು ಅರಿತಿದ್ದ ಪರಮಪೂಜ್ಯ ಸಿದ್ದಗಂಗಾಶ್ರೀಗಳು ತಮ್ಮ ಹಿಂದಿನ ಗುರುಗಳು ನಡೆಸಿಕೊಂಡು ಬಂದಿದ್ದ ದಾಸೋಹ ಸೇವೆಗೆ ಎಂದೂ ಚ್ಯುತಿ ಬಾರದಂತೆ ಭಕ್ತರ ಮನೆಗಳಿಗೆ ತೆರಳಿ ಭಿಕ್ಷೆ ಬೇಡಿ ಅನ್ನವನ್ನು ಹಾಕಿದ ಮಹಾಮಾನವತಾವಾದಿ ಎಂದರು.
ದಾಸೋಹಕ್ಕೆ ಚಾಲನೆ ನೀಡಿದ ಅರ್ಚಕರ ಸಂಘದ ಅಧ್ಯಕ್ಷ ಮೆಣಸಗೆರೆ ಶಿವಲಿಂಗಯ್ಯ ಮಾತನಾಡಿ, ಸ್ವಾಮೀಜಿಯವರು ತಾವೇ ಅಡುಗೆ ಮಾಡುತ್ತಿದ್ದರು. ಸೌದೆ, ಸೊಪ್ಪು ಹೊಂದಿಸಲು ಸಿದ್ಧರಾಗಿದ್ದರು. ಶ್ರೀಗಳಿಗೆ ಅಪಾರ ಶ್ರದ್ಧೆ ದಾಸೋಹದಲ್ಲಿತ್ತು. ಅವರ ಕ್ರಿಯಾ ಸಿದ್ಧಿ ಕಾರಣದಿಂದ ಅನುಚಾನವಾಗಿ ನಡೆದುಕೊಂಡು ಬಂದಿದೆ. ಶಿವಕುಮಾರ ಸ್ವಾಮೀಜಿ ಅವರು ಪ್ರತಿ ವರ್ಷ ಭಕ್ತರ ಮನೆಗೆ ತೆರಳಿ ರೈತರು ಬೆಳೆದ ದವಸ, ಧಾನ್ಯಗಳನ್ನು ಬೇಡಿ ತರುತ್ತಿದ್ದರು. ದಾಸೋಹಕ್ಕೆ ಭಕ್ತರೇ ಎಲೆ, ತರಕಾರಿ, ಹುಣಸೆಹಣ್ಣು, ರಾಗಿ, ಅಕ್ಕಿ, ಬೇಳೆ, ಬೆಲ್ಲ ಮತ್ತಿತರ ವಸ್ತುಗಳ ರೂಪದಲ್ಲಿ ಅರ್ಪಿಸುವ ಪದ್ಧತಿ ಇಂದಿಗೂ ಬೆಳೆದು ಬಂದಿದೆ ಎಂದರು.
ಯೋಗ ಶಿಕ್ಷಕ ಎಚ್.ವಿ.ಶಿವರುದ್ರಪ್ಪ ಮಾತನಾಡಿ, ಪೂಜ್ಯರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಂಡಾಗ ಸಮಾಜನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಜಿ.ಮಹಾಂತಪ್ಪ, ಎಸ್.ಐ.ಹೊನ್ನಲಗೆರೆ ನಿಂಗಪ್ಪ, ಕೆಂಪರಾಜು, ಲೋಕೇಶ್, ವಿಜಯಕುಮಾರ್ ಹೊಸಹಳ್ಳಿ, ಮಧು, ವಿನಯ್, ಸಿದ್ದಲಿಂಗಸ್ವಾಮಿ, ಬೆಳ್ಳೂರು ಶಂಕರಪ್ಪ, ಶೇಖರ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.