
ಚಿತ್ರದುರ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿರುವ (Parappana Agrahara Jail) ಕೊಲೆ ಆರೋಪಿಯೊಬ್ಬ ಚಿತ್ರದುರ್ಗದ (Chitradurga) ಹಿರಿಯೂರಿನ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ (Death threat) ಹಾಕಿರುವ ಆರೋಪ ಕೇಳಿಬಂದಿದೆ. ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದ ಆರೋಪಿ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ, ಹಿರಿಯೂರಿನ ಉದ್ಯನಿ ಅರ್ಜುನ್ ಸಿಂಗ್ಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವಿದೆ. ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದಲ್ಲದೆ, ನಿರಂತರವಾಗಿ ವಾಯ್ಸ್ ಕಾಲ್, ಮೆಸೇಜ್ಗಳ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದಾರೆ.
ಅರ್ಜುನ್ ಸಿಂಗ್ ಅವರು ಹಿರಿಯೂರು ಸರ್ಕಾರಿ ಆಸ್ಪತ್ರೆ ಬಳಿ ಆಯಕಟ್ಟಿನ ಜಾಗದಲ್ಲಿರುವ ಕಟ್ಟಡದಲ್ಲಿ ಮಳಿಗೆ ನಡೆಸುತ್ತಿದ್ದಾರೆ. ಇದನ್ನು ಮೂರು ದಿನದಲ್ಲಿ ಕಟ್ಟಡ ಖಾಲಿ ಮಾಡದಿದ್ದರೆ ಜೀವ ಉಳಿಸಲ್ಲ. ಸುಟ್ಟು ಹಾಕುತ್ತೇನೆಂದು ಸುಜಯ್ ಭಾರ್ಗವ್ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಕೆಲ ದಿನ ಹಿಂದೆ ಇಬ್ಬರು ಹುಡುಗರನ್ನು ಗಾರ್ಮೆಂಟ್ಸ್ ಗೆ ಕಳಿಸಿ ಅವಾಜ್ ಹಾಕಿಸಿದ್ದ. ಜನವರಿ 10 ರಂದು ಸಹ ಅಪರಿಚಿತ ಯುವಕರಿಬ್ಬರು ಬಂದು ಧಮ್ಕಿ ಹಾಕಿದ್ದರು. ಈ ವಿಡಿಯೋ ಸಿಸಿಟಿವಿಲಿ ರೆಕಾರ್ಡ್ ಆಗಿತ್ತು. ಸುಜಯ್ ಕಡೆಯವರೆಂದು ಹೇಳಿಕೊಂಡು ಬಂದು ಯುವಕರು ಧಮ್ಕಿ ಹಾಕಿದ್ದರು. ಈ ಬಗ್ಗೆ ಹಿರಿಯೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಈಗ ಮತ್ತೆ ನಿರಂತರ ಕರೆ, ವಾಯ್ಸ್ ಮೆಸೇಜ್ ಮೂಲಕ ಸುಜಯ್ ಧಮ್ಕಿ ಹಾಕುತ್ತಿದ್ದಾನೆ ಎನ್ನಲಾಗಿದೆ. ಕಟ್ಟಡ ಮಾಲೀಕ ಸೂರ್ಯನಾರಾಯಣ, ಅವರ ಪುತ್ರನಿಗೂ ಕರೆ ಮಾಡಿ ಆವಾಜ್ ಹಾಕಿದ್ದಾನೆ. ಸೂರ್ಯನಾರಾಯಣರ ಸಹೋದರ ಚಂದ್ರಶೇಖರ್ ಪುತ್ರನೇ ಸುಜಯ್. ಚಂದ್ರಶೇಖರ್ ದಶಗಳ ಹಿಂದೆಯೇ ಆಸ್ತಿಯಲ್ಲಿ ಪಾಲು ಪಡೆದಿದ್ದರು.
ನಾನು ನಿನ್ನ ಮಗನಿದ್ದಂತೆ, ನನಗೂ ಪಾಲು ಕೊಡು ಎಂದು ಸುಜಯ್ ಧಮ್ಕಿ ಹಾಕಿದ್ದಾಗಿ ಸೂರ್ಯನಾರಾಯಣ ಹೇಳಿದ್ದು, ಸುಜಯ್ ಮತ್ತು ನಮ್ಮ ಮದ್ಯೆ ಯಾವುದೇ ಆಸ್ತಿ ವಿವಾದ ಇಲ್ಲ ಎಂದಿದ್ದಾರೆ. ಹೀಗಾಗಿ, ಅರ್ಜುನ್ ಸಿಂಗ್ಗೆ ಬೆದರಿಸಿ ಮಳಿಗೆ ಖಾಲಿ ಮಾಡಿಸಿ ತನ್ನ ಸುಪರ್ದಿಗೆ ಪಡೆಯುವ ಹುನ್ನಾರ ಸುಜಯ್ನದ್ದು ಎನ್ನಲಾಗಿದೆ. ಪರಪ್ಪನ ಅಗ್ರಹಾರದಲ್ಲಿರುವ ಪಾತಕಿಯ ಬೆದರಿಕೆ ಕರೆಯಿಂದ ಕಂಗೆಟ್ಟಿರುವ ಉದ್ಯಮಿ, ಕಟ್ಟಡ ಮಾಲೀಕರು ಸದ್ಯ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.