ಶ್ರೀ ಕ್ಷೇತ್ರದ ಜ್ಞಾನ ವಿಕಾಸ ಯೋಜನಾ ಅಡಿಯಲ್ಲಿ ನಿರ್ಮಾಣವಾದ ವಾತ್ಸಲ್ಯ ಮನೆಯ ನಾಮಫಾಲಕವನ್ನು ಅನಾವರಣ ಮಾಡುವುದರ ಮೂಲಕ ವಾರಸುದಾರರಿಗೆ ಹಸ್ತಾಂತರ

ತಾಲ್ಲೂಕಿನ ಹೊಸಹೊಳಲು ಗ್ರಾಮದ ಬಡ ಮಹಿಳೆ ಸರಸ್ವತಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಯೋಜನಾ ಅಡಿಯಲ್ಲಿ ವಾಸ್ತಲ್ಯ ಮನೆ ನಿರ್ಮಾಣ ಮಾಡಿ ವಾತ್ಸಲ್ಯ ಮನೆಯ ನಾಮಫಲಕ ಅನಾವರಣ ಗೊಳಿಸಿ ವಾರಸುದಾರರಿಗೆ ಮನೆಯನ್ನು ಹಸ್ತಾಂತರಿಸಿ ಮಾತನಾಡಿದ ಅವರು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಅಮ್ಮನವರ ಮಾರ್ಗದರ್ಶನದಲ್ಲಿ ಅನೇಕ ಮಹಿಳೆಯರಿಗೆ ಬದುಕಿನಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ನೊಂದ ಮಹಿಳೆಯವರಿಗೆ ಸಾಂತ್ವನ ನೀಡಲಾಗುತ್ತಿದೆ. ವಾತ್ಸಲ್ಯ ಮನೆ ನಿರ್ಮಿಸಿ ಸರಸ್ವತಮ್ಮ ರವರಿಗೆ ಮನೆ ಹಸ್ತಾಂತರ ಮಾಡುತ್ತಿದ್ದು ಇದರ ಸಧ್ಬಳಕೆ ಮಾಡಿಕೊಳ್ಳಬೇಕು ಎಂದ ಆರ್.ಟಿ.ಓ. ಮಲ್ಲಿಕಾರ್ಜುನ್ ಅಸಹಾಯಕ ಕುಟುಂಬಗಳನ್ನು ಗುರುತಿಸಿ, ಪ್ರತಿ ತಿಂಗಳ ಮಾಸಾಶನ ಸೌಲಭ್ಯ ನೀಡಿ ಆಸರೆಯಾಗುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸೌಲಭ್ಯಗಳು ಜನರಿಗೆ ಸಾಕಷ್ಟು ರೀತಿಯಲ್ಲಿ ಅನುಕೂಲವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ಅನುಕೂಲ ಕಲ್ಪಿಸುವ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿದರು.
ನಂತರ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲತ್ತಾಯ್ ಮಾತನಾಡಿ ಯಾವುದೇ ಆದಾಯದ ಮೂಲ ಹೊಂದಿರದ ಹಾಗೂ ನಿವೇಶನವಿರುವ ನಿರ್ಗತಿಕರಿಗೆ ಸ್ವಂತ ಸೂರು ಒದಗಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ ಎಂದು ತಿಳಿಸಿದ ಅವರು, ಸ್ವಂತ ನಿವೇಶನ ಇಲ್ಲದಿದ್ದರೂ ದಾನಿಗಳು ಅಥವಾ ಸರ್ಕಾರದಿಂದ ನಿವೇಶನ ಒದಗಿಸಿದರೂ ಅಂತಹ ನಿರ್ಗತಿಕರಿಗೆ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಬಳಿಕ ಜಿಲ್ಲಾ ಜನ ಜಾಗೃತಿ ನಿರ್ದೇಶಕ ಶೀಳನೆರೆ ಅಂಬರೀಷ್ ಮಾತನಾಡಿ ಶ್ರೀ ಧರ್ಮಸ್ಥಳ ಕ್ಷೇತ್ರ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದೆ. ಸಮಾಜದ ಬಗ್ಗೆ ಅಪಾರ ಕಾಳಜಿ ವಹಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುವ ಕಾರ್ಯ ನಮ್ಮೆಲ್ಲರಿಗೂ ಪ್ರೇರಣೆ ಮತ್ತು ಮಾದರಿಯಾಗಿದೆ ಸೂರು ಇಲ್ಲದವರಿಗೆ ಮನೆ ನೀಡುತ್ತಿರುವುದು ಬಹಳ ಸಂತೋಷ. ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಹೆಚ್.ಆರ್. ಲೋಕೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕೆ.ಆರ್ ರಾಜೇಶ್, ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್. ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು. ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.