ಇತ್ತೀಚಿನ ಸುದ್ದಿ
Trending

ಟಿಪ್ಸ್ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಕ್ಯಾಬ್​ಗಳು

ಬೆಂಗಳೂರು, ಮಾರ್ಚ್ 27: ಅಧಿಕೃತವಾಗಿ ಬೇಕಾಬಿಟ್ಟಿ ಹಣ ವಸೂಲಿ ಮಾಡಲು ಸಾಧ್ಯವಾಗದೇ ಇರುವುದರಿಂದ ಕ್ಯಾಬ್ ಅಗ್ರಿಗೇಟರ್​​ಗಳು (Cab Aggregators) ಬೆಂಗಳೂರಿನಲ್ಲಿ ಟಿಪ್ಸ್ (Tips) ಹೆಸರಿನಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬುಕಿಂಗ್ ದರ 40 ರೂಪಾಯಿ ಇದ್ದರೆ, ಟಿಪ್ಸ್ ಹೆಸರಿನಲ್ಲಿ ಮತ್ತೆ 30 ರಿಂದ 50 ರೂ. ವಸೂಲಿ ಮಾಡಲಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ. ಕ್ಯಾಬ್ ಅಗ್ರಿಗೇಟರ್​​ಗಳಾದ ಓಲಾ, ಊಬರ್, ನಮ್ಮ ಯಾತ್ರಿಗಳು ಈ ರೀತಿ ವಂಚನೆ ಎಸಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.ಕ್ಯಾಬ್ ಬುಕಿಂಗ್ ಮಾಡುವಾಗ ಹೆಚ್ಚುವರಿಯಾಗಿ 10 ರಿಂದ 15 ರೂಪಾಯಿ ಟಿಪ್ಸ್ ಆ್ಯಡ್ ಮಾಡದಿದ್ದರೆ ಬುಕಿಂಗ್ ಪರಿಗಣನೆಯಾಗುವುದೇ ಇಲ್ಲ ಎಂಬ ದೂರುಗಳು ಕೇಳಿಬಂದಿವೆ.ಪೀಕ್ ಅವರ್​ನಲ್ಲಿ, ತುರ್ತು ಬೇಡಿಕೆ ಇರುವ ಸಂದರ್ಭಗಳಲ್ಲಿ ಟಿಪ್ಸ್ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇಂತಹ ವಸೂಲಿಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖಾಸಗಿ ಸಾರಿಗೆ ಒಕ್ಕೂಟ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದೆ.

ಅಗ್ರಿಗೇಟರ್ ಕಂಪನಿಗಳು ಕ್ಯಾಬ್ ಚಾಲಕರಿಗೆ ಮೇಲೆ ಕಡಿಮೆ ದರ ನೀಡುತ್ತಿವೆ. ಇದರಿಂದ, ಅವರ ಜೀವನೋಪಾಯದ ಮೇಲೆ ನಿರಂತರವಾಗಿ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಕರ್ನಾಟಕ ಆ್ಯಪ್ ಆಧಾರಿತ ಕಾರ್ಮಿಕರ ಒಕ್ಕೂಟ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಸೇವೆ ಬಹಿಷ್ಕರಿಸುವ ಅಭಿಯಾನಕ್ಕೆ ಕರೆ ನೀಡಿತ್ತು.ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ಅಗ್ರಿಗೇಟರ್ ಸೇವೆಗಳಿಗೆ ಏಕರೂಪ ಮತ್ತು ನ್ಯಾಯಯುತ ಬೆಲೆ ನಿಗದಿಗೆ ಒತ್ತಾಯಿಸಿ ಪದೇ ಪದೇ ಮನವಿ ಸಲ್ಲಿಸಿದರೂ ಯಾವುದೇ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ಗ್ರಾಹಕರಿಗೆ ಹೆಚ್ಚು ದರ ವಿಧಿಸಿದರೂ ಚಾಲಕರಿಗೆ ನ್ಯಾಯಯುತವಾದ ದರವನ್ನು ಕಂಪನಿಗಳು ನೀಡುತ್ತಿಲ್ಲ ಎಂದು ಒಕ್ಕೂಟ ಆರೋಪಿಸಿತ್ತು. ಅಲ್ಲದೆ, ಚಾಲಕರಿಗೆ ನ್ಯಾಯಯುತ ವೇತನ ಮತ್ತು ಸುಸ್ಥಿರ ಜೀವನೋಪಾಯ ಖಾತರಿಪಡಿಸಿಕೊಳ್ಳಲು ಸರ್ಕಾರವು ತಕ್ಷಣವೇ ಏಕರೂಪದ ಶುಲ್ಕ ಪ್ರಕಟಿಸಬೇಕು ಎಂದು ಆಗ್ರಹಿಸಿತ್ತು.

ಒಟ್ಟಿನಲ್ಲಿ ಒಂದೆಡೆ ಗ್ರಾಹಕರಿಂದ ಟಿಪ್ಟ್ ಹೆಸರಿನಲ್ಲಿಯೂ ದುಪ್ಪಟ್ಟು ಹಣ ವಸೂಲಿ ಮಾಡುವ ಕ್ಯಾಬ್ ಅಗ್ರಿಗೇಟರ್​​​ಗಳು ಚಾಲಕರಿಗೆ ಮಾತ್ರ ನ್ಯಾಯಯುತವಾದ ಮೊತ್ತ ನೀಡದೇ ಇರುವುದು ಬಯಲಾಗಿದೆ. ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button