ವಿದೇಶ
Trending

ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್, ವಿಲ್ಮೋರ್

ನವದೆಹಲಿ, ಮಾರ್ಚ್ 19: ಬರೋಬ್ಬರಿ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್‌ ವಿಲ್ಮೋರ್‌ನ್ನು (Butch Wilmore) ಅತ್ಯಂತ ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್‌ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 8.35ಕ್ಕೆ 400 ಕಿ.ಮೀ ದೂರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪಯಣ ಆರಂಭಿಸಿತ್ತು. ನಿರಂತರ 17 ಗಂಟೆಗಳ ಪಯಣದ ಬಳಿಕ ಭಾರತೀಯ ಕಾಲಮಾನ, ಸರಿಯಾಗಿ ಇಂದು ನಸುಕಿನ 3.27ರ ಸಮಯಕ್ಕೆ ಅಮೆರಿಕದ ಫ್ಲೋರಿಡಾ ಸಾಗರದಲ್ಲಿ ಲ್ಯಾಂಡ್ ಆಗಿದೆ.ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ 9 ತಿಂಗಳಿಂದ ಬೋಯಿಂಗ್ ಸ್ಟಾರ್‌ಲೈನರ್‌ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್‌ ಮತ್ತು ಇವರಿಬ್ಬರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ.

ಸುರಕ್ಷಿತ ಲ್ಯಾಂಡಿಂಗ್

ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಸ್ಪೇಸ್‌ಕ್ರಾಫ್ಟ್‌ ‘ದಿ ಕ್ರ್ಯೂ-9 ಭೂಮಿಯ ಗುರುತ್ವಾಕರ್ಷಣೆಗೆ ಒಳಪಡುತ್ತಿದ್ದಂತೆಯೇ ವೇಗ ಕಡಿಮೆಮಾಡಿಕೊಂಡಿತು. ನೌಕೆ ಸಮುದ್ರದತ್ತ ಧಾವಿಸುವಾಗ ಪ್ಯಾರಾಚೂಟ್‌ಗಳು ತೆರೆದುಕೊಂಡವು. ಮೊದಲಿಗೆ ಸ್ಪೇಸ್ ಎಕ್ಸ್‌ಡ್ರ್ಯಾಗನ್ ನೌಕೆಯನ್ನು ಸ್ಥಿರಗೊಳಿಸಲು ಎರಡು ಡ್ರೋಗ್ ಪ್ಯಾರಾಚೂಟ್‌ಗಳನ್ನು ತೆರೆಯಲಾಯಿತು. ಆ ನಂತರ ಲ್ಯಾಡಿಂಗ್ ಆಗಲೆಂದು ನೌಕೆಯ ವೇಗ ಮತ್ತಷ್ಟು ಕಡಿಮೆಮಾಡಲು ಮೇನ್ ಆಗಿದ್ದ ನಾಲ್ಕು ಪ್ಯಾರಾಚೂಟ್‌ಗಳನ್ನು ತೆರೆಯಲಾಯಿತು. ಇದಾದ ಕೆಲವೇ ಕ್ಷಣಗಳಲ್ಲಿ ನೌಕೆ ಅತ್ಯಂತ ನಯವಾಗಿ, ಸುರಕ್ಷಿತವಾಗಿ ಸಮುದ್ರಕ್ಕೆ ಅಪ್ಪಳಿಸಿತು. ಸಮುದ್ರಕ್ಕೆ ಬೀಳುತ್ತಿದ್ದಂತೆಯೇ ಸ್ಪೇಸ್ ಎಕ್ಸ್‌ ಕ್ರ್ಯೂಸ್‌ನ ಕ್ಯಾಪ್ಸುಲ್‌ ತೇಲಲು ಪ್ರಾರಂಭಿಸಿತು.

4 ಬೋಟ್‌ಗಳಲ್ಲಿ ಎಂಟ್ರಿಕೊಟ್ಟ ಅಮೆರಿಕಾದ ನೌಕಾಪಡೆ

ಸುನೀತಾ ವಿಲಿಯಮ್ಸ್ ಸೇರಿ ನಾಲ್ವರು ಗಗನಯಾತ್ರಿಗಳಿದ್ದ ನೌಕೆಯ ಕ್ಯಾಪ್ಸುಲ್‌ ಸಮುದ್ರದಲ್ಲಿ ಬಿದ್ದು ತೇಲುತ್ತಿದ್ದಂತೆಯೇ ಕೆಲವೇ ಕ್ಷಣಗಳಲ್ಲಿ ಮೂರು ಬೋಟ್‌ಗಳಲ್ಲಿ ಅಮೆರಿಕ ನೌಕಾಪಡೆ ಸ್ಥಳಕ್ಕೆ ಧಾವಿಸಿತು. ಈಗಾಗಲೇ ಸಿದ್ಧವಾಗಿ ನಿಂತಿದ್ದ ಸ್ಪೇಸ್ ಎಕ್ಸ್​ನ ರಿಕವರಿ ಶಿಪ್ ಕೂಡ ಸ್ಥಳಕ್ಕೆ ಧಾವಿಸಿತು.

ಹೊರಬರುತ್ತಿದ್ದಂತೆ ಕೈ ಬೀಸಿದ ಸುನೀತಾ ವಿಲಿಯಮ್ಸ್

ನಂತರ ನೌಕಾಪಡೆ ಸಿಬ್ಬಂದಿ ಮೊದಲಿಗೆ ಗಗನಯಾತ್ರಿಗಳಿದ್ದ ಕ್ಯಾಪ್ಸುಲ್‌ ನಿಯಂತ್ರಣಕ್ಕೆ ರೋಪ್‌ಗಳಿಂದ ಕಟ್ಟಿ ಹಡಗಿನ ಬಳಿಗೆ ಎಳೆದೊಯ್ದರು. ಬಳಿಕ ಅತ್ಯಂತ ನಾಜೂಕಾಗಿ ಕ್ಯಾಪ್ಸುಲ್‌ ಅನ್ನು ಹಡಗಿಗೆ ಸ್ಥಳಾಂತರ ಮಾಡಿದರು. ಇದಾದ ಕೆಲವೇ ಹೊತ್ತಿನಲ್ಲಿ ನಟ್ಟು, ಬೋಲ್ಟ್‌ಗಳಿಂದ ಟೈಟಾಗಿದ್ದ ಕ್ಯಾಪ್ಸುಲ್‌ನ ಡೋರ್‌ಅನ್ನು ತೆಗೆಯಲಾಯಿತು. ಮೊದಲಿಗೆ ನಾಸಾ ಗಗನಯಾತ್ರಿ ಹೇಗ್‌ರನ್ನು ಹೊರಗೆ ತರಲಾಯಿತು. ನಂತರ ರಷ್ಯಾದ ಗಗನನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಹೊರಗೆ ತರಲಾಯಿತು.ಇವರಿಬ್ಬರೂ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಸುನೀತಾ ಮತ್ತು ವಿಲ್ಮೋರ್‌ ಅವರನ್ನು ಕರೆತರಲು 8 ದಿನಗಳ ಹಿಂದಷ್ಟೇ ತೆರಳಿದ್ದರು. ತಕ್ಷಣ ಎದ್ದು ನಿಲ್ಲಲು ಆಗದಿದ್ದರೂ ಇವರಿಬ್ಬರ ದೇಹಸ್ಥಿತಿಯಲ್ಲಿ ಅಷ್ಟಾಗಿ ಬದಲಾವಣೆ ಕಂಡುಬಂದಂತೆ ಕಾಣಲಿಲ್ಲ.ಇನ್ನು ಮೂರನೆಯದಾಗಿ ಸುನೀತಾ ವಿಲಿಯಮ್ಸ್‌ರನ್ನು ಹೊರಗೆ ಕರೆತರಲಾಯಿತು. ಬರೋಬ್ಬರಿ 9 ತಿಂಗಳ ಬಳಿಕ ಭೂಮಿಗೆ ಬಂದ ಸುನೀತಾರ ಸಂತಸಕ್ಕೆ ಪಾರವೇ ಇರಲಿಲ್ಲ. ಎದ್ದು ನಿಲ್ಲಲೂ ಆಗದ ಸುನಿತಾ ಕುಳಿತಲ್ಲೇ ನಗುಮೊಗದೊಂದಿಗೆ ಕೈಬೀಸಿ ಸಂಭ್ರಮ ವ್ಯಕ್ತಪಡಿಸಿದರು. ಕೊನೆಯದಾಗಿ ಸುನೀತಾ ಜತೆಗಿದ್ದ ಮತ್ತೊಬ್ಬ ಗಗನಯಾತ್ರಿ ಬುಚ್‌ ವಿಲ್ಮೋರ್‌ನ್ನು ಹೊರಗೆ ತರಲಾಯಿತು. ಈ ಎಲ್ಲಾ ಪ್ರಕ್ರಿಯೆಗಳು ನಸುಕಿನ 3.28ಕ್ಕೆ ಶುರುವಾಗಿ 4.27ರ ಸುಮಾರಿಗೆ ಮುಕ್ತಾಯಗೊಂಡಿತು.

ನಾಲ್ವರು ಗಗನಯಾತ್ರಿಗಳು ಹೆಲಿಕಾಪ್ಟರ್‌ನಲ್ಲಿ ನಾಸಾ ಆಸ್ಪತ್ರೆಗೆ ಶಿಫ್ಟ್

ನಂತರ ನಾಲ್ವರು ಗಗನಯಾತ್ರಿಗಳನ್ನು ಅವರು ಧರಿಸಿದ್ದ ವಿಶೇಷ ಸ್ಪೇಸ್‌ಸೂಟ್‌ನಲ್ಲೇ ಹೆಲಿಕಾಪ್ಟರ್ ಮೂಲಕ ನಾಸಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಷ್ಟು ದಿನ ಬಾಹ್ಯಾಕಾಶದಲ್ಲಿದ್ದ ಕಾರಣ ಇಲ್ಲಿನ ವಾತಾವರಣಕ್ಕೆ ಗಗನಯಾತ್ರಿಗಳು ಹೊಂದಿಕೊಳ್ಳಬೇಕಿದೆ. ಅವರ ಆರೋಗ್ಯ ಸ್ಥಿತಿ ಸ್ಪಂದಿಸಬೇಕಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತೆ. ಸಮಗ್ರವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button