ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ವಾಟರ್ ವಾರ್, ಕಾವೇರಿ ಆರನೇ ಹಂತದ ಯೋಜನೆಗೆ ದಳ ವಿರೋಧ

ಮಂಡ್ಯ ಜಿಲ್ಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ನೀರಿಗಾಗಿ ವಾರ್ ಆರಂಭವಾಗಿದೆ. ಕೆಆರ್ಎಸ್ ಡ್ಯಾಂನಿಂದ ಬೆಂಗಳೂರು ನಗರದ ಹೊರವಲಯಕ್ಕೆ ಕಾವೇರಿ ನೀರು ಪೂರೈಸುವ ‘ಕಾವೇರಿ ಆರನೇ ಹಂತದ ಯೋಜನೆ’ಗೆ ಜೆಡಿಎಸ್ ಮಂಡ್ಯ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕಾಂಗ್ರೆಸ್ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಇದು ಉಭಯ ಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದಿಂದ ಬೆಂಗಳೂರು ನಗರದ ಹೊರವಲಯಕ್ಕೆ ನೀರು ಪೂರೈಸುವುದಕ್ಕೆ ಸಂಬಂಧಿಸಿದ್ದೇ ಕಾವೇರಿ ಆರನೇ ಹಂತದ ಯೋಜನೆಯಾಗಿದೆ. ಈ ಯೋಜನೆ ಸಂಬಂಧ ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಹಾಗೂ ಪ್ರಸ್ತಾಪನೆ ಸಲ್ಲಿಕೆ ಮಾಡಿದೆ. ಯೋಜನೆಯಡಿ 6 ಟಿಎಂಸಿ ನೀರು ಪೂರೈಕೆಗೆ ಉದ್ದೇಶಿಸಲಾಗಿದೆ.ಕೆಲವೇ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಹ, ಕಾವೇರಿ ನದಿಯಿಂದ 6 ಟಿಎಂಸಿ ನೀರನ್ನು ತರಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದರು. ಉದ್ಯಮಗಳಿಗೆ ನೀರು, ವಿದ್ಯುತ್ ಮತ್ತು ಭೂಮಿಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದರು.ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾವೇರಿ 6ನೇ ಹಂತದ ಯೋಜನೆಯಿಂದ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ, ನಾಗಮಂಗಲ ತಾಲೂಕಿನ ರೈತರಿಗೆ ತೊಂದರೆ ಆಗಲಿದೆ. ಈ ಮೂರು ತಾಲೂಕುಗಳಲ್ಲಿ ಎರಡನೇ ಬೆಳೆಗೆ ನೀರು ಸಿಗುವುದಿಲ್ಲ ಎಂಬುದು ಜೆಡಿಎಸ್ ವಾದವಾಗಿದೆ.ಮಂಡ್ಯ ಜಿಲ್ಲೆಯ ಕೊನೆಯ ಭಾಗದ ರೈತರಿಗೆ ಕಾವೇರಿ ಆರನೇ ಹಂತದ ಯೋಜನೆ ಮರಣ ಶಾಸನವಾಗಲಿದೆ ಎಂದು ಜೆಡಿಎಸ್ ನಾಯಕ, ಮಾಜಿ ಸಚಿವ ಡಿಸಿ ತಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ.ಬೆಂಗಳೂರು ಹೊರವಲಯಕ್ಕೆ ಬೇರೆ ಮೂಲದಿಂದ ನೀರು ಕೊಡಿ. ಕಾವೇರಿ ಆರನೇ ಹಂತದ ಯೋಜನೆ ಅನುಷ್ಠಾನಗೊಳಿಸಿದರೆ ಜೆಡಿಎಸ್ನಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಮ್ಮಣ್ಣ ಎಚ್ಚರಿಕೆ ನೀಡಿದ್ದಾರೆ.ಏತನ್ಮಧ್ಯೆ, ಜೆಡಿಎಸ್ ನಾಯಕರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಮಾತ್ರ ಬಳಸಿಕೊಳ್ಳುತ್ತೇವೆ. ಈ ವಿಚಾರದಲ್ಲಿ ಜೆಡಿಎಸ್ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.