ಪಾಕಿಸ್ತಾನದಲ್ಲಿ ಭಾರತದ ಧ್ವಜಕ್ಕೆ ಮತ್ತೊಮ್ಮೆ ಅವಮಾನ; ತಲೆಕೆಳಗಾಗಿ ಹಾರಿದ ತ್ರಿವರ್ಣ!

2025ರ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಪಾಕಿಸ್ತಾನದ ಗಡಾಫಿ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸ್ಪಷ್ಟೀಕರಣವು ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದೆ. ಭಾರತದ ಎಲ್ಲಾ ಪಂದ್ಯಗಳು ಭದ್ರತಾ ಕಾರಣಗಳಿಂದ ದುಬೈಗೆ ಸ್ಥಳಾಂತರಗೊಂಡಿವೆ.2025 ರ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಪ್ರಾರಂಭವಾಗುತ್ತಿದೆ. ಆದರೆ ಆತಿಥೇಯ ಪಾಕಿಸ್ತಾನ ಮಾತ್ರ, ಭಾರತದ ವಿರುದ್ಧ ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸುವುದನ್ನು ಇದುವರೆಗೂ ಕಡಿಮೆ ಮಾಡಿಲ್ಲ. ಕೆಲವು ದಿನಗಳ ಹಿಂದೆ ಈ ಪಂದ್ಯಾವಳಿಗೆ ಆತಿಥ್ಯ ನೀಡುತ್ತಿರುವ ಕರಾಚಿಯ ಗಡಾಫಿ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಭಾರತದ ಧ್ವಜವನ್ನು ಹೊರತುಪಡಿಸಿ ಉಳಿದ 7 ತಂಡಗಳ ದೇಶದ ಧ್ವಜವನ್ನು ಹಾರಿಸಿತ್ತು. ಇದೀಗ ಪಾಕಿಸ್ತಾನದ ಗಡಾಫಿ ಕ್ರೀಡಾಂಗಣದ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಾರಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಈ ನಡೆಗೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗಡಾಫಿ ಕ್ರೀಡಾಂಗಣದಲ್ಲಿ ವ್ಯಕ್ತಿಯೊಬ್ಬ ಭಾರತದ ಧ್ವಜವನ್ನು ಹಾರಿಸುತ್ತಿರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದು, ಭಾರತೀಯರು ಕೆರಳುವಂತೆ ಮಾಡಿದೆ. ಈ ವಿಡಿಯೋದಲ್ಲಿ ಭಾರತವನ್ನು ಹೊರತುಪಡಿಸಿ, ಇತರ ದೇಶಗಳ ಧ್ವಜಗಳು ಸಹ ಗೋಚರಿಸುತ್ತವೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಇರಿಸಲಾಗಿದೆ. ಆದರೆ ತ್ರಿವರ್ಣ ಧ್ವಜವನ್ನು ಮಾತ್ರ ತಪ್ಪಾಗಿ ಹಾರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಿದೆ ಎಂದು ಭಾರತೀಯರು ಆರೋಪಿಸುತ್ತಿದ್ದಾರೆ.ವಾಸ್ತವವಾಗಿ ಈ ಹಿಂದೆ ಗಡಾಫಿ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಹಾರಿಸದಿರುವ ಬಗ್ಗೆ ಗದ್ದಲ ಉಂಟಾದಾಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು. ಇದರ ಹಿಂದಿನ ಕಾರಣವನ್ನು ವಿವರಿಸಿದ ಪಾಕ್ ಮಾಧ್ಯಮ, ‘2025 ರ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಲ್ಲಿ ಕೇವಲ ನಾಲ್ಕು ಧ್ವಜಗಳು ಮಾತ್ರ ಹಾರಿಸಬೇಕು ಎಂದು ಐಸಿಸಿ ಸೂಚಿಸಿತ್ತು. ಈ ನಾಲ್ಕು ಧ್ವಜಗಳಲ್ಲಿ ಒಂದು ಐಸಿಸಿಯದ್ದು, ಇನ್ನೊಂದು ಆತಿಥೇಯ ದೇಶದ್ದು ಹಾಗೂ ಉಳಿದ ಎರಡು ಧ್ವಜಗಳು ಯಾವ ತಂಡಗಳ ನಡುವೆ ಪಂದ್ಯ ನಡೆಯುತ್ತಿರುತ್ತದೊ ಆ ದೇಶಗಳದ್ದು ಎಂದು ಹೇಳಿಕೊಂಡಿತ್ತು. ಆದರೆ ಪಿಸಿಬಿಯ ಈ ಕಳಪೆ ವಿವರಣೆಯು ಇನ್ನಷ್ಟು ಗದ್ದಲವನ್ನು ಸೃಷ್ಟಿಸಿತ್ತು. ಏಕೆಂದರೆ ಕ್ರೀಡಾಂಗಣದಲ್ಲಿ 4 ಕ್ಕೂ ಹೆಚ್ಚು ಧ್ವಜಗಳನ್ನು ಹಾರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿತ್ತು. ಇದಾದ ನಂತರ ಐಸಿಸಿ, ಟೀಂ ಇಂಡಿಯಾದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿತು. ಈ ಟೂರ್ನಿಯಲ್ಲಿ ಭಾರತ ತಂಡ ಫೆಬ್ರವರಿ 20 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯ ಬಾಂಗ್ಲಾದೇಶ ವಿರುದ್ಧ ನಡೆಯಲಿದ್ದು ಇದರ ನಂತರ, ಭಾರತ ತಂಡವು ಫೆಬ್ರವರಿ 23 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಬಳಿಕ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.