ಇತ್ತೀಚಿನ ಸುದ್ದಿರಾಜ್ಯ

ಮೈಸೂರಿನಲ್ಲಿ ಕಿಡಿ ಹೊತ್ತಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಉಪಯೋಗಕ್ಕಿಂತ ದುರುಪಯೋಗವಾಗುತ್ತಿರುವುದೇ ಹೆಚ್ಚಾಗುತ್ತಿದೆ. ಲಂಗು ಲಗಾಮಿಲ್ಲದ‌ ಪೋಸ್ಟ್‌ಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಇದಕ್ಕೆ ಸಾಕ್ಷಿ ಮೈಸೂರಿನ ಉದಯಗಿರಿಯಲ್ಲಿ ಸೋಮವಾರ ರಾತ್ರಿ ನಡೆದ ಪ್ರಕರಣ. ಯುವಕನೊಬ್ಬ ಹಾಕಿದ ಪೋಸ್ಟ್ ರಾತ್ರೋ ರಾತ್ರಿ ವಿವಾದದ ಕಿಡಿ ಹೊತ್ತಿಸಿದೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದು, ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಘಟನೆಯ ವಿವರ ಇಲ್ಲಿದೆ.ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೊಬ್ಬ ಹಾಕಿದ ಒಂದು ಸೋಷಿಯಲ್‌ ಮೀಡಿಯಾ ಪೋಸ್ಟ್ ಸಾಮಾಜಿಕ ಸ್ವಾಸ್ಥ್ಯವನ್ನೇ ಕೆಡಿಸಿದೆ. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆತ ಪೋಸ್ಟ್ ಮಾಡಿದ್ದ. ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಲಾಗಿತ್ತು.ವ್ಯಂಗ್ಯವಾಗಿ ಹಾಕಿದ್ದಷ್ಟೇ ಆಗಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಆ ಪೋಸ್ಟ್‌ನಲ್ಲಿ ಒಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವಾಕ್ಯಗಳನ್ನು ಬರೆಯಲಾಗಿತ್ತು. ಇದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ.

ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತೋ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಗುಂಪು ಇದನ್ನು ಕೇಳಲು ಸಿದ್ಧರಿರಲಿಲ್ಲ.‌ ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು.ಪರಿಸ್ಥಿತಿ ವಿಕೋಪಕ್ಕೆ ಹೋದದ್ದನ್ನು ಗಮನಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅದಕ್ಕೂ ಬಗ್ಗದೇ ಹೋದಾಗ ಅಶ್ರುವಾಯು ಸಿಡಿಸಿ ಯುವಕರ ಗುಂಪನ್ನು ಚದುರಿಸಲಾಯಿತು. ಅಶ್ರುವಾಯು ಸಿಡಿಸಿದ ತಕ್ಷಣ ಗುಂಪು ಚೆಲ್ಲಾಪಿಲ್ಲಿಯಾಗಿ ಓಡಿ ಹೋಯಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಉದಯಗಿರಿ ಪೊಲೀಸ್ ಠಾಣೆ ಬಳಿಗೆ ಹೆಚ್ಚಿನ ಪೊಲೀಸರನ್ನು ಕರೆಸಿದ್ದಾರೆ. ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸ್ಥಳಕ್ಕೆ ಆಗಮಿಸಿ, ಸ್ಥಳದಲ್ಲಿದ್ದವರಿಗೆ ಬುದ್ದಿ ಮಾತು‌ ಹೇಳಿದ್ದಾರೆ. ಡಿಸಿಪಿ ಮುತ್ತುರಾಜ್ ಜೊತೆಗೂಡಿ ಶಾಂತಿ ಕಾಪಾಡುವಂತೆ ವಿಡಿಯೋ ಮಾಡಿ ಯುವಕರಲ್ಲಿ ಮನವಿ ಮಾಡಿದ್ದಾರೆ.ಅಲ್ಲಿಗೆ ಪರಿಸ್ಥಿತಿ ತಿಳಿಗೊಂಡಿತು. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಕಾರ್ಯಾಚರಣೆ, ಮುಖಂಡರ ಮನವಿಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೂ ವಾತಾವರಣ ಬೂದಿಮುಚ್ಚಿದ ಕೆಂಡದಂತಿದೆ.



Related Articles

Leave a Reply

Your email address will not be published. Required fields are marked *

Back to top button