ಚಾಮರಾಜನಗರಕ್ಕೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ:ಮೂವರು ರೈತರಿಗೆ ಜಮೀನು ಕಳೆದುಕೊಳ್ಳುವ ಆತಂಕ
ಚಾಮರಾಜನಗರ:ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದ ಗಡಿ ಜಿಲ್ಲೆ ಚಾಮರಾಜನಗರಕ್ಕೂ ಕಾಲಿಟ್ಟಿದೆ. ಇಲ್ಲಿನ ವಿ.ಸಿ.ಹೊಸೂರಿನ ಮೂವರು ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಗ್ರಾಮದ ಮೂವರು ರೈತರ ಜಮೀನನ್ನು ವಕ್ಫ್ ಸಂಸ್ಥೆಯ ಹೆಸರಿಗೆ ಖಾತೆ ಬದಲಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ತಹಸಿಲ್ದಾರರಿಗೆ 2022 ರ ಜುಲೈನಲ್ಲಿ ಬರೆದಿರುವ ಪತ್ರ ಇದೀಗ ಬೆಳಕಿಗೆ ಬಂದಿದೆ.
ಬಂಡಿಗೆರೆ ಸರ್ವೆ ನಂಬರ್ 179ರ 2 ಎಕರೆ 9 ಗುಂಟೆ ಜಮೀನು ಎಚ್ಜಿ ಶಾಂತಪ್ಪ,ಎಚ್ವಿ ಗಿರಿಮಲ್ಲು, ಎಚ್.ವಿ.ನಾಗರಾಜು ಎಂಬುವರ ಹೆಸರಿನಲ್ಲಿದ್ದು ಇದನ್ನು ಹರದನಹಳ್ಳಿಯ ಜಾಮಿಯಾ ಮಸೀದಿ ವಕ್ಫ್ ಆಸ್ತಿ ಎಂದು ಖಾತೆ ಬದಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ
ಈ ಹಿನ್ನಲೆಯಲ್ಲಿ ಖಾತೆ ಬದಲಿಗೆ ಕ್ರಮ ಕೈಗೊಳ್ಳಲು ಮೂರು ತಿಂಗಳ ಹಿಂದೆಯಷ್ಟೇ ಆರ್.ಆರ್.ಟಿ ವಿಭಾಗದಿಂದ ರಾಜಸ್ವ ನಿರೀಕ್ಷಕರಿಗೆ ಈ ಪತ್ರ ರವಾನೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು 45 ವರ್ಷಗಳ ಹಿಂದೆ ನಮ್ಮ ತಂದೆ ಮುಸ್ಲಿಂ ವ್ಯಕ್ತಿಯಿಂದ ಜಮೀನು ಖರೀದಿಸಿದ್ದಾರೆ. ಆದರೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಪತ್ರದ ಪ್ರತಿ ನಮಗೆ ಇದೀಗ ಲಭ್ಯವಾಗಿದ್ದು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ನಮಗೂ ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.