ಆರೋಗ್ಯಇತ್ತೀಚಿನ ಸುದ್ದಿರಾಜ್ಯ

ನಂದಿನಿ ಹಾಲಿನ ಬೆಲೆ ಏರಿಕೆ ಪ್ರಯೋಜನ ರೈತರಿಗೆ ಸಿಗಲ್ಲ! ಹಾಲು ಉತ್ಪಾದಕರು ಹೇಳುವ ಲೆಕ್ಕಾಚಾರ

ಕೋಲಾರ, ಸೆಪ್ಟೆಂಬರ್ 17: ರಾಜ್ಯದಲ್ಲಿ ಹಾಲಿನ ದರ‌‌ ಏರಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಗಳಾಗುತ್ತಿವೆ. ಸಚಿವರು, ಶಾಸಕರು ಬೆಲೆ ಏರಿಕೆ ಕುರಿತು ಸಮರ್ಥನೆ ಮಾಡಿಕೊಂಡರೆ, ಸಾಮಾನ್ಯ ಜನರು ಹಾಗೂ ರೈತರು ಸರ್ಕಾರವು ರೈತರ ಹೆಸರು ಹೇಳಿಕೊಂಡು ಬೆಲೆ ಏರಿಕೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿವೆ. ಅವಿಭಜಿತ ಜಿಲ್ಲೆಗಳಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಜನ ಹಾಲು ಉತ್ಪಾದಕರಿದ್ದಾರೆ. ಜೊತೆಗೆ ಕಳೆದ ವರ್ಷ ರಾಜ್ಯ ಸೇರಿದಂತೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿವೆ. ಹೀಗಿರುವಾಗ, ರಾಜ್ಯದಲ್ಲಿ ರೈತರು ಹಾಗೂ ಹಾಲು ಉತ್ಪಾದಕರ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ರೈತ ವಿರೋಧಿ ದೋರಣೆ ಅನುಸರಿಸುತ್ತಿದೆ ಎಂದು ರೈತರು ಮತ್ತು ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ.

2 ಬಾರಿ ಹಾಲು ಖರೀದಿ ದರ ಇಳಿಕೆ ಮಾಡಿದ್ದ ಕಾಂಗ್ರೆಸ್ ಸರ್ಕಾರ

ಕೋಲಾರ, ಚಿಕ್ಕಬಳ್ಳಾಪುರದಲ್ಲಿ 1800 ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ. ಜಿಲ್ಲೆಯಲ್ಲಿ ನಿತ್ಯ ಸುಮಾರು ಹತ್ತು ಲಕ್ಷ ಲೀಟರ್​ ಹಾಲು ಉತ್ಪಾದನೆಯಾಗುತ್ತಿದೆ. ಹಾಗಾಗಿ ಹೈನೋದ್ಯಮವನ್ನು ನಂಬಿ ಬದುಕುತ್ತಿರುವ ರೈತರ ಸಂಖ್ಯೆ ಹೆಚ್ಚಾಗಿಯೇ ಇದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿ, ಎರಡು ಬಾರಿ ರೈತರಿಂದ ಹಾಲಿನ ಖರೀದಿ ದರವನ್ನು ಇಳಿಕೆ ಮಾಡಿದೆ.

ಹಾಲಿನ ದರದಲ್ಲಿ ರೈತರಿಗೆ ಸಿಗುತ್ತಿರುವುದೆಷ್ಟು?

ಹಾಲಿನ ಖರೀದಿ ದರ ಇಳಿಕೆ ಮಾಡುವ ಮೊದಲು ರೈತರಿಗೆ ಲೀಟರ್​ ಹಾಲಿಗೆ 34 ರೂಪಾಯಿ ಸಿಗುತ್ತಿತ್ತು. ಆದರೆ ಹಾಲು ಖರೀದಿ ದರ ಎರಡು ಬಾರಿ ಇಳಿಕೆ ಮಾಡಿದ ನಂತರ ಈಗ ಲೀಟರ್ ಹಾಲಿಗೆ ರೈತರಿಗೆ ಸಿಗುತ್ತಿರುವುದು ಕೇವಲ 30 ರೂಪಾಯಿ 15 ಪೈಸೆ ಮಾತ್ರ. ಆದರೆ, ಹಾಲು ದರ ಏರಿಕೆ ಮಾಡಿ ಸರ್ಕಾರ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಮಾತ್ರ 60 ರೂಪಾಯಿಗೆ! ಈಗ ಹಾಲಿನ ದರ 5 ರೂಪಾಯಿ ಏರಿಕೆ ಮಾಡಿ ಏರಿಕೆ ಮಾಡಿದ ದರವನ್ನು ನೇರವಾಗಿ ರೈತರಿಗೆ ಕೊಟ್ಟರೂ ರೈತರಿಗೆ ಲೀಟರ್ ಹಾಲಿಗೆ ಸಿಗುವುದು ಕೇವಲ 35 ರೂಪಾಯಿ. ಆದರೆ ಗ್ರಾಹಕರಿಗೆ ಮಾರಾಟ ಮಾಡುವುದು 65 ರೂ.ಗೆ. ಹಾಗಾಗಿ ಸರ್ಕಾರ ಒಂದು ಲೀಟರ್ ಹಾಲಿನ ಮೇಲೆ 30 ರೂ. ಲಾಭ ಪಡೆಯುತ್ತಿದೆ ಎಂಬುದು ಹಾಲು ಉತ್ಪಾದಕರ ಮಾತು.

ಪಶು ಆಹಾರ ಬೆಲೆ ಇಳಿಕೆಗೆ ಆಗ್ರಹ

ಪ್ರತಿಬಾರಿ ಹಾಲಿನ ಏರಿಕೆ ಮಾಡುತ್ತಿದ್ದಂತೆ ಪಶು ಆಹಾರ ಹಾಗೂ ಪೀಡ್ಸ್​ ಸೇರಿ ಎಲ್ಲಾ ಬೆಲೆಗಳು ಏರಿಕೆಯಾಗುತ್ತವೆ. ಅವರು ಮಾತ್ರ ಬೆಲೆ ಕಡಿಮೆ ಮಾಡುವುದೇ ಇಲ್ಲ. ಇದರಿಂದ ಹಾಲಿನ ದರ ಏರಿಕೆ ಮಾಡುವುದಕ್ಕಿಂತ ಹೆಚ್ಚಾಗಿ ಪಶುಆಹಾರದ ಬೆಲೆ ಇಳಿಕೆ ಮಾಡಿದರೆ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂಬ ಮಾತುಗಳು ಕೂಡಾ ರೈತರಿಂದ ಕೇಳಿ ಬರುತ್ತಿದೆ.

ಕಳೆದ ಒಂದು ವರ್ಷದಿಂದ ಮಳೆ ಇಲ್ಲದೆ ಬೆಳೆದ ಬೆಳೆಗಳೆಲ್ಲ ಕೈಕೊಟ್ಟಿವೆ. ರೈತರಿಗೆ ಮೇವಿನ ಕೊರತೆ ಕೂಡಾ ಕಾಡುತ್ತಿದೆ. ಹಾಲು ಉತ್ಪಾದಕರಿಗೆ ಕೋಟಿ ಕೋಟಿ ಪ್ರೋತ್ಸಾಹಧನ ಬಾಕಿ ಇದ್ದು ಅದು ಇನ್ನೂ ರೈತರಿಗೆ ಕೊಟ್ಟಿಲ್ಲ. ಅದರೂ ಸಹ ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡಲು ಚಿಂತನೆ ಮಾಡುತ್ತಿದೆ ಎಂಬ ಆರೋಪಗಳ ಕೇಳಿ ಬಂದಿವೆ.

ಸಚಿವ ಬೈರತಿ ಸುರೇಶ್ ಹೇಳುವುದೇನು?

ಇನ್ನು ಬಗ್ಗೆ ಸಚಿವ ಬೈರತಿ ಸುರೇಶ್ ಹಾಗೂ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ನಂಜೇಗೌಡ ಹೇಳುವುದೇ ಬೇರೆ. ನಮ್ಮ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿಯೇ ಅತಿ ಕಡಿಮೆ‌ ದರದಲ್ಲಿ ಹಾಲು ಸಿಗುತ್ತಿದೆ. ಪಕ್ಕದ ರಾಜ್ಯಗಳಲ್ಲಿ ಈಗಾಗಲೇ‌ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ. ಹಾಗಾಗಿಯೇ ರಾಜ್ಯದ ಮುಖ್ಯಮಂತ್ರಿಗಳು ಈ ಬಗ್ಗೆ ಅಧಿಕಾರಿಗಳ ಜೊತೆ‌ ಚರ್ಚೆ ಮಾಡಿ ಅಂತಿಮ‌ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಇವರಾಡುವ ಮಾತು.

ಒಟ್ಟಾರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲಿನ ದರ ಮಾತ್ರ ಏರಿಕೆಯಾಗುತ್ತಿದ್ದು, ರೈತರಿಗೆ ಇದರ ಲಾಭ ಸಿಗುತ್ತಿಲ್ಲ. ಈ ಬಾರಿಯಾದರೂ ಸರ್ಕಾರ ಏರಿಕೆ ಮಾಡುವ ಹಾಲಿನ ದರದಲ್ಲಿ ಹಾಲು ಉತ್ಪಾದಕ ರೈತರಿಗೆ ಒಂದಷ್ಟು ಲಾಭ ಸಿಗಬೇಕಿದೆ. ಇಲ್ಲದಿದ್ದರೆ ರೈತರ ಶಾಪಕ್ಕೆ ಸರ್ಕಾರ ಗುರಿಯಾಗುವುದರಲ್ಲಿ‌ ಯಾವುದೇ ಅನುಮಾನವಿಲ್ಲ.

Related Articles

Leave a Reply

Your email address will not be published. Required fields are marked *

Back to top button