ಇತ್ತೀಚಿನ ಸುದ್ದಿರಾಜ್ಯ

ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ತಾಲೂಕು ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಪಂ, ಜಿಪಂ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷ ಜಿ.ಎನ್.ಸತ್ಯ ಮಾತನಾಡಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಜಿಲ್ಲಾ ಪಂಚಾಯಿತಿ ಸಿಇಒ ಅವರ ನಿರ್ಲಕ್ಷ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತಾತ್ಮಕ ಸಮಸ್ಯೆಗಳ ಇತ್ಯರ್ಥಕ್ಕಾಗಿ, ತಾಲೂಕು ಪಂಚಾಯಿತಿ ಮುಂದೆ ಮೂರು ಬಾರಿ ಹೋರಾಟಗಳನ್ನು ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕರ್ತವ್ಯ ಲೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿದಾಗ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟು ಮನವಿಯನ್ನು ಆಲಿಸಿ ಸಭೆ ಮಾಡುತ್ತೇವೆ ಎಂದು ಭರವಸೆ ಕೊಟ್ಟ ಕಾರಣ ಹಿಂದೆ ನಡೆದ ಹೋರಾಟವನ್ನು ಹಿಂಪಡೆಯಲಾಗಿತ್ತು ಎಂದರು.
ಸಚಿವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು, ಅದು ಈಡೇರಿಲ್ಲ. ಆದ್ದರಿಂದ ಮತ್ತೊಮ್ಮೆ ಪ್ರತಿಭಟನೆಗೆ ಹಮ್ಮಿಕೊಂಡಿದ್ದು ನಮ್ಮ ಬೇಡಿಕೆ ಈಡೇರುವ ತನಕ ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಗ್ರಾಪಂ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಕೇರಳ ರಾಜ್ಯದ ಮಾದರಿಯಂತೆ ಅಧ್ಯಕ್ಷರಿಗೆ 15 ಸಾವಿರ ಹಾಗೂ ಉಪಾಧ್ಯಕ್ಷರಿಗೆ 13 ಸಾವಿರ ಸದಸ್ಯರುಗಳಿಗೆ 10 ಸಾವಿರ ಗೌರವ ಧನ ಹೆಚ್ಚಿಸಬೇಕು ಹಾಗೂ ಉಚಿತವಾಗಿ ಬಸ್ ಪಾಸ್ ಮತ್ತು ಅರೋಗ್ಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.
ಜಲ ಜೀವನ್ ಮಿಷನ್ ಅನುಷ್ಟಾನದಲ್ಲಿ ವಿಲಂಬ ಮತ್ತು ಕಳಪೆ ಕಾಮಗಾರಿ ಅಗಿರುವ ಬಗ್ಗೆ ಸೂಕ್ತ ಕ್ರಮ ಮತ್ತು ತನಿಖೆಯಾಗಬೇಕು. ಗ್ರಾಪಂಗಳಿಗೆ ಹಸ್ತಾಂತರಿಸುವ ಮುನ್ನ ಕಾಮಗಾರಿ ಗುಣಮಟ್ಟದಿಂದ ನೈಜವಾಗಿ ಮುಕ್ತಾಯಗೊಂಡಿರುವ ಬಗ್ಗೆ ಅನುಷ್ಟಾನ ಇಲಾಖೆಯ ತಾಂತ್ರಿಕ ವರದಿ ಮತ್ತು ಕಾಮಗಾರಿ ತೃಪ್ತಿಕರವಾಗಿದೆ ಎಂದು ದೃಢೀಕರಣ ನೀಡಬೇಕು ಎಂದು ಒತ್ತಾಯಿಸಿದರು.
ಮದ್ದೂರು ತಾಲೂಕು ಪಂಚಾಯಿತಿ ವ್ಯವಸ್ಥಾಪಕ ರಾಮಕೃಷ್ಣ ಅವರು ಸರ್ಕಾರದ ಆದೇಶದಂತೆ ಅಮಾನತ್ತಿನಲ್ಲಿದ್ದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮದ್ದೂರು ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಿ.ಎನ್.ಸತ್ಯ, ಪ್ರಧಾನ ಕಾರ್ಯದರ್ಶಿ ಎಂ.ಇ.ಕೃಷ್ಣ, ತಾಲೂಕು ಗೌರವಾಧ್ಯಕ್ಷ ಎಸ್.ದಯಾನಂದ, ಉಪಾಧ್ಯಕ್ಷರಾದ ಡಿ.ನಳಿನಿ, ಸಿ.ಶಿವಲಿಂಗಯ್ಯ, ಬ್ಯಾಡರಹಳ್ಳಿ ರಾಮಕೃಷ್ಣ, ಎಂ.ಮಹೇಶ್, ಎಸ್.ಬಿ.ತಮ್ಮೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ವಿಜಯ್ಎನ್.ಗೌಡ, ಎ.ಜಗದೀಶ್, ಮಾದೇಶ್, ಎಂ.ಚಂದ್ರಶೇಖರ, ಶ್ವೇತಾ, ಖಜಾಂಚಿ ಎಚ್.ಕೆ.ನಂದೀಶ್ಗೌಡ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿ.ಬಿ.ಮಂಜುನಾಥ, ನಿರ್ದೇಶಕರಾದ ಎಚ್.ಎಲ್.ದಯಾನಂದ, ಮಹಾಲಕ್ಷ್ಮಿ, ಎಚ್.ಗೋವರ್ಧನ, ಎಸ್.ಕೃಷ್ಣ, ಕೃಷ್ಣ, ಕೆ.ಆರ್.ವೆಂಕಟೇಶ ಇದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮದ್ದೂರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ತಾಲೂಕು ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಜಿ.ಎನ್.ಸತ್ಯಾ, ಎಂ.ಇ.ಕೃಷ್ಣ, ಎಸ್.ದಯಾನಂದ, ಡಿ.ನಳಿನಿ, ಸಿ.ಶಿವಲಿಂಗಯ್ಯ ಇದ್ದರು.

Related Articles

Leave a Reply

Your email address will not be published. Required fields are marked *

Back to top button