ಇತ್ತೀಚಿನ ಸುದ್ದಿರಾಜ್ಯ

 ಗೊರಗುಂಟೆಪಾಳ್ಯ ಸಿಗ್ನಲ್​ನಲ್ಲಿ ಹೆವಿ ಟ್ರಾಫಿಕ್; ಸ್ಕೈ ವಾಕರ್ ಅಥವಾ ಅಂಡರ್ ಗ್ರೌಂಡ್ ನಿರ್ಮಾಣಕ್ಕೆ ಆಗ್ರಹ 

ಬೆಂಗಳೂರು, ಫೆ.07: ರಾಜ್ಯದ ವಿವಿಧ ಜಿಲ್ಲೆಗಳಿಂದ ಸಿಲಿಕಾನ್ ಸಿಟಿಗೆ ಬರುವ ಪ್ರಮುಖ ಮಾರ್ಗ ಗೊರಗುಂಟೆಪಾಳ್ಯ. ಇಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವುದರಿಂದ ಸಾಕಷ್ಟು ಟ್ರಾಫಿಕ್‌ ಜಾಮ್ ಉಂಟಾಗಿ ಜನರು ದಿನನಿತ್ಯ ರಸ್ತೆ ದಾಟಲು ಪರದಾಡುವಂತಾಗಿದೆ. ಹೀಗಾಗಿ ಜನರು ಸ್ಕೈ ವಾಕರ್ ಇಲ್ಲವೇ ಅಂಡರ್ ಗ್ರೌಂಡ್ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯ ವಾಹನಗಳು ಎಂಟ್ರಿ ಕೊಡೋದು ಗೊರಗುಂಟೆಪಾಳ್ಯ ಮೂಲಕ. ಪ್ರತಿದಿನ ಲಕ್ಷಾಂತರ ವಾಹನಗಳು ಓಡಾಡುವುದರಿಂದ ಇದೇ ಗೊರಗುಂಟೆಪಾಳ್ಯ ಸಿಗ್ನಲ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇಲ್ಲಿ ರಸ್ತೆ ದಾಟಬೇಕು ಅಂದ್ರೆ ಪಾದಚಾರಿಗಳಿಗೆ ಟ್ರಾಫಿಕ್ ಬಿಸಿಯೊಂದೆಡೆಯಾದರೆ ಮತ್ತೊಂದೆಡೆ ಅಪಘಾತ ಆಗುವ ಭಯದಲ್ಲೇ ಜನರು ಪ್ರತಿ ದಿನ ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ಅಲ್ಲದೇ ವಯೋ ವೃದ್ಧರು ಓಡಾಡಬೇಕು ಅಂದರೆ ಕಷ್ಟದಲ್ಲೆ ಓಡಾಡಬೇಕು. ಹೀಗಾಗಿ ಸ್ಕೈ ವಾಕರ್ ಇಲ್ಲವೇ ಅಂಡರ್ ಗ್ರೌಂಡ್ ಮೂಲಕ ಪಾದಚಾರಿಗಳು ಸುಗಮವಾಗಿ ಓಡಾಡಲು ಮಾರ್ಗ ಕಲ್ಪಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ನಮ್ಮ ಜೀವಕ್ಕೆ ಏನಾದರು ಹಾನಿಯಾದರೆ ಯಾರು ಹೊಣೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೂ ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನ ಸಂಪರ್ಕಿಸಿದರೆ ಈಗಾಗಲೇ ಸಾರ್ವಜನಿಕರಿಂದ ಆಗ್ರಹ ಬಂದ ಮೇರೆಗೆ ಸ್ಕೈ ವಾಕರ್ ನಿರ್ಮಾಣಕ್ಕೆ ನಿಯೋಜನೆ ಮಾಡಲಾಗಿದೆ. ಆದರೆ ಪಕ್ಕದಲ್ಲೆ ಮೆಟ್ರೋ ಹಾಗೂ ಮೆಟ್ರೋ ಲೈನ್ ಕೆಳಗಡೆ ಸ್ಕೈ ವಾಕರ್ ನಿರ್ಮಾಣ ಮಾಡಬೇಕಾಗಿರುವುದರಿಂದ ಬಿಎಂಆರ್‌ಸಿ‌ಎಲ್‌ಗೆ ನೋ ಆಬ್ಜಕ್ಸೆನ್ (ಎನ್‌ಓಸಿ) ಗಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಅವರು ಇನ್ನೂ ಎನ್‌ಓಸಿ ಕೊಟ್ಟಿಲ್ಲ. ಕೊಟ್ಟ ಕೂಡಲೆ ಸ್ಕೈ ವಾಕರ್ ಕಾಮಗಾರಿ ಅರಂಭಿಸುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬಿಎಂಆರ್‌ಸಿಎಲ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಪ್ರತಿ ದಿನ ಜನರು ರಸ್ತೆ ದಾಟಲು ಭಯಪಡುತ್ತಿದ್ದಾರೆ. ಜೀವ ಭಯದಲ್ಲೆ ಓಡಾಡುವಂತಾಗಿದೆ. ಇನ್ನಾದ್ರು ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಪಾದಚಾರಿಗಳಿಗೆ ತೊಂದರೆ ಆಗದಂತೆ ಸ್ಕೈ ವಾಕರ್ ನಿರ್ಮಾಣ ಮಾಡುವ ಮೂಲಕ ಜನರ ಸಮಸ್ಯೆ ಬಗೆ ಹರಿಸಬೇಕಿದೆ.

Related Articles

Leave a Reply

Your email address will not be published. Required fields are marked *

Back to top button