ಇತ್ತೀಚಿನ ಸುದ್ದಿರಾಜ್ಯ

ರಾಷ್ಟ್ರ ರಾಜಕಾರಣಕ್ಕೆ ಜಯದೇವ ಮಾಜಿ ನಿರ್ದೇಶಕ ಡಾ ಮಂಜುನಾಥ್ ಕರೆತರಲು ಜೆಡಿಎಸ್ ಕಸರತ್ತು

ಬೆಂಗಳೂರು, ಫೆಬ್ರವರಿ 6: ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕರಾಗಿದ್ದ ಡಾ. ಸಿಎನ್ ಮಂಜುನಾಥ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರಲು ಜೆಡಿಎಸ್ ನಾಯಕರು ಕಸರತ್ತು ನಡೆಸುತ್ತಿರುವುದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಮಂಜುನಾಥ್ ಮನವೊಲಿಕೆಗೆ ದಳಪತಿಗಳು ಮುಂದಾಗಿದ್ದಾರೆ. ಜತೆಗೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಸ್ಪರ್ಧಿಸುವಂತೆ ಮಾಡಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜೆಡಿಎಸ್ ಅಥವಾ ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡುವುದು ದಳಪತಿಗಳ ಲೆಕ್ಕಾಚಾರವಾಗಿದೆ. ಬೆಂಗಳೂರು ಗ್ರಾಮಾಂತರ ಅಥವಾ ಬೆಂಗಳೂರು ಉತ್ತರದಿಂದ ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ಕಮಲದಳ ನಾಯಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಿಂದ ಜೆಡಿಎಸ್ ಅಥವಾ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಂಜುನಾಥ್ ಕಣಕ್ಕಿಳಿದರೆ ಗೆಲುವಿನ ಹಾದಿ ಸುಗಮ ಎಂಬುದು ಉಭಯ ಪಕ್ಷಗಳ ನಾಯಕರ ಅಂದಾಜು.

ಡಾ. ಮಂಜುನಾಥ್ ರಾಜ್ಯದಾದ್ಯಂತ ಮನೆಮಾತಾಗಿದ್ದಾರೆ. ಮಂಜುನಾಥ್ ಅವರದು ಉತ್ತಮವಾದ ವ್ಯಕ್ತಿತ್ವ. ಮಂಜುನಾಥ್ ರಾಜಕೀಯಕ್ಕೆ ಬಂದರೆ ಎನ್​​ಡಿಎ ಮೈತ್ರಿಗೆ ಒಂದು ಆಸ್ತಿ ಆದಂತೆ ಎಂಬ ಲೆಕ್ಕಾಚಾರ ಬಿಜೆಪಿ, ಜೆಡಿಎಸ್ ನಾಯಕರದ್ದಾಗಿದೆ.

ಬಿಜೆಪಿ ಜತೆ ಜೆಡಿಎಸ್ ಚರ್ಚೆ

ಡಾ. ಮಂಜುನಾಥ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಮಾಡುವ ಬಗ್ಗೆ ಬಿಜೆಪಿ ನಾಯಕರ ಜೊತೆ ಜೆಡಿಎಸ್ ನಾಯಕರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಮಂಜುನಾಥ್ ಮನವೊಲಿಕೆಗೆ ದಳಪತಿಗಳು ಸಾಕಷ್ಟು ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ಆದರೆ, ಸದ್ಯ ರಾಜಕೀಯ ಪ್ರವೇಶಿಸುವ ಬಗ್ಗೆ ಅವರು ಯಾವುದೇ ನಿರ್ಧಾರ ತಿಳಿಸಿಲ್ಲ. ಆದರೆ, ಸದ್ಯದ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರ ಅಧಿಕಾರವಧಿ ಜನವರಿ 30ರಂದ ಕೊನೆಗೊಂಡಿತ್ತು. ಅವರನ್ನು ಸಂಸ್ಥೆಯಿಂದ ಗೌರವ ಪೂರ್ವಕವಾಗಿ ಬೀಳ್ಕೊಡಲಾಗಿತ್ತು. ಬೀಳ್ಕೊಡುಗೆ ಸಮಾರಂಭದ ಬಳಿಕ ಮಾತನಾಡಿದ್ದ ಅವರು, ಜಯದೇವ ಹೃದ್ರೋಗ ಆಸ್ಪತ್ರೆಯು ಜನರ ಆಸ್ಪತ್ರೆಯಾಗಿದೆ. ಇದನ್ನು ಪಂಚಾತಾರ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಹೊಂದಿದ್ದೆವು. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವವನ್ನು ಬೆಳಸಲಾಗಿದೆ. ಇಷ್ಟು ವರ್ಷದ ಸೇವೆ ಸಂತೋಷ ತಂದಿದೆ. ನಿವೃತ್ತಿ ಬಳಿಕವೂ ವೈದ್ಯಕೀಯ ಸೇವೆ ಮುಂದುವರಿಸುತ್ತೇನೆ. ಸದಾ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದರು.

Related Articles

Leave a Reply

Your email address will not be published. Required fields are marked *

Back to top button