ಇತ್ತೀಚಿನ ಸುದ್ದಿರಾಜ್ಯ

ಪಿಎಸ್​ಐ ನೇಮಕಾತಿ ಅಕ್ರಮ: ಜಂಟಿ ಅಧಿವೇಶನದಲ್ಲಿ ತನಿಖಾ ವರದಿ ಮಂಡಿಸಲು ಸಿಎಂ ಸಿದ್ದರಾಮಯ್ಯ ಚಿಂತನೆ

ಪಿಎಸ್​ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಇದನ್ನು ಜಂಟಿ ಅಧಿವೇಶನದಲ್ಲಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದ ತನಿಖಾ ವರದಿಯನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿತ್ತು.

ಒಟ್ಟು 470ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಸಿರುವ ತನಿಖಾ ಸಮಿತಿ, ನೇಮಕಾತಿ ವೇಳೆ ಆಗಿರುವ ಲೋಪಗಳ ಬಗ್ಗೆ ಸಂಕ್ಷಿಪ್ತವಾಗಿ ಉಲ್ಲೇಖಿಸಿದೆ. ಪ್ರಕರಣದಲ್ಲಿ ಹಲವು ರಾಜಕಾರಣಿಗಳು ಭಾಗಿಯಾಗಿದ್ದಾರೆಂಬ ಆರೋಪವನ್ನೂ ಮಾಡಲಾಗಿದೆ. ನೋಟಿಸ್​ ನೀಡಿದ್ದರೂ ಕೆಲವು ಪ್ರಭಾವಿಗಳು ಗೈರಾದ ಬಗ್ಗೆಯೂ ಉಲ್ಲೇಖಿಸಲಾಗಿದೆ. ವರದಿಯಲ್ಲಿನ್ನ ಅಂಶಗಳನ್ನು ಸದ್ಯದ ಮಟ್ಟಿಗೆ ಗೋಪ್ಯವಾಗಿರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದೂ ಹೇಳಲಾಗಿದೆ.

ಸಮಿತಿ ಸಲ್ಲಿಸಿದ ವರದಿಯನ್ನು ಕ್ಯಾಬಿನೆಟ್​​​​​ನ ಮುಂದಿಡಲು ಮುಖ್ಯಮಂತ್ರಿಗಳು ಚಿಂತನೆ ಮಾಡಿದ್ದಾರೆ. ಅದಾದ ನಂತರ ವರದಿಯನ್ನು ಜಂಟಿ ಅಧಿವೇಶನದಲ್ಲಿ ಮಂಡಿಸಲು ಅವರು ಯೋಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪಿಎಸ್​ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಮರು ತನಿಖೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಏನಿದು ಪಿಎಸ್​ಐ ನೇಮಕಾತಿ ಅಕ್ರಮ?

545 ಪಿಎಸ್​ಐ ಹುದ್ದೆಗಳ ಭರ್ತಿಗಾಗಿ ಕಳೆದ ವರ್ಷದ ಅಕ್ಟೋಬರ್ 3 ರಂದು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿನ 93 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಹಣ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತು. 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್​ಗಳಿಗೂ ಹಣದ ಹೊಳೆ ಹರಿದಿತ್ತು. ಬ್ರೋಕರ್​ಗಳ ಹಂತದಲ್ಲಿಯೂ ಕನಿಷ್ಠ 10 ಲಕ್ಷ, ನೇಮಕಾತಿ ವಿಭಾಗದ ಅಧಿಕಾರಿಗೆ 30-35 ಲಕ್ಷ ತಲುಪುತ್ತಿತ್ತು ಎಂಬ ಅಂಶ ತಿಳಿದುಬಂದಿತ್ತು.

ವಿಚಾರಣೆಗೆ ಹಾಜರಾಗದ ರಾಜಕಾರಣಿಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಪೊಲೀಸ್ ಅಧಿಕಾರಿಗಳ ಬಂಧನವಾಗಿದೆ. ಪ್ರಭಾವಿ ರಾಜಕೀಯ ಮುಖಂಡರೂ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಕೆಲವು ರಾಜಕಾರಣಿಗಳಿಗೂ ವಿಚಾರಣಾ ಆಯೋಗ ನೋಟಿಸ್ ನೀಡಿತ್ತು. ಆದರೆ, ಕೆಲವು ಮಂದಿ ರಾಜಕೀಯ ಮುಖಂಡರು ನೋಟಿಸ್ ನೀಡಿದ ಹೊರತಾಗಿಯೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಸಮಿತಿಯ ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button