ಬೆಂಗಳೂರು ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಆರಂಭ: ಉತ್ಸವ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಇಂದಿನಿಂದ (ಜ.20) ಬನಶಂಕರಿ ಅಮ್ಮನವರ 108ನೇ ಜಾತ್ರಾ ಮಹೋತ್ಸವ ಆರಂಭವಾಗಿದೆ. ಜನವರಿ 29ರ ವರೆಗೆ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ. ಪ್ರತಿ ದಿನ ಮುಂಜಾನೆ 5 ಗಂಟೆಗೆ ಅಮ್ಮನವರಿಗೆ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ ನಡೆಯುತ್ತದೆ.
ಜಾತ್ರಾಮಹೋತ್ಸವ ವಿವರ
ಜ.21ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಶ್ರೀ ಧನ್ವಂತರಿ ಹೋಮ ಆಯೋಜಿಸಲಾಗಿದೆ.
ಜ.22ರಂದು ರುದ್ರಹೋಮ, ಸಂಜೆ 5 ಗಂಟೆಗೆ ಶ್ರೀ ಪರ್ವತ ಮಲ್ಲಿಕಾರ್ಜುನ ಸ್ವಾಮಿಗೆ ಬಿಲ್ವಾರ್ಚನೆ ನಡೆಯುತ್ತದೆ.
ಜ.23ರಂದು ಶ್ರೀ ದುರ್ಗಾ ಹೋಮ, ಶ್ರೀ ಸೂಕ್ತ ಹೋಮ, ಶ್ರೀ ಸಾರಸ್ವತ ಹೋಮ ನೆರವೇರುತ್ತದೆ.
ಜ.24ರಂದು ನವಚಂಡಿಕಾ ಹೋಮ, ಮೂಲ ದೇವರ ಸನ್ನಿಧಿಯಲ್ಲಿ ವಿಶೇಷ ಪಲ್ಯದ ಪೂಜೆ ನಡೆಯುತ್ತದೆ.
ಜ.25ರಂದು ಬನದ ಹುಣ್ಣಿಮೆ ಅಂಗವಾಗಿ ಬೆಳಗ್ಗೆ 11.50 ರಿಂದ 12.50ರವರೆಗೆ ರಥಾರೋಹಣ ಜರಗುತ್ತದೆ. ಅಂದು ಸಂಜೆ 6ಕ್ಕೆ ಶಾಕಾಂಬರಿ ದೇವಿಯವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದ್ದು ಭಕ್ತಾಧಿಗಳು ಪಾಲ್ಗೊಳ್ಳಲು ಆಡಳಿತ ಮಂಡಳಿಯಿಂದ ಮನವಿ ಮಾಡಿದೆ.