ಕೇಂದ್ರ ಬಜೆಟ್ನಲ್ಲಿ ಅಯೋಧ್ಯೆಗೆ ಭರ್ಜರಿ ಕೊಡುಗೆ ನೀಡಲಿದ್ದಾರಾ ನಿರ್ಮಲಾ ಸೀತಾರಾಮನ್?
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶ ಕಾತರದಿಂದಿದೆ. ಜನವರಿ 22 ರಂದು ದೇವಸ್ಥಾನದಲ್ಲಿ ರಾಮ ಲಾಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಜನವರಿ 22 ರ ನಂತರ ಸುಮಾರು ಒಂದು ವಾರದ ಬಳಿಕ ಮೋದಿ ಸರ್ಕಾರದ ಈ ಅಧಿಕಾರಾವಧಿಯ ಕೊನೆಯ ಬಜೆಟ್ (Union Budget 2024) ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಆದರೆ ಅದರ ಮೇಲೆ ರಾಮ ಮಂದಿರದ ಪರಿಣಾಮ ಗೋಚರಿಸಲಿದೆಯೇ? ನಿರ್ಮಲಾ ಸೀತಾರಾಮನ್ ಅವರು ಅಯೋಧ್ಯೆಗೆ ಅನೇಕ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗಳು ಈಗ ಉದ್ಭವವಾಗಿದೆ.
ಸುಮಾರು 3.5 ಲಕ್ಷ ಜನಸಂಖ್ಯೆ ಹೊಂದಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ನಂತರ ಪ್ರವಾಸಿಗರ ಸಂಖ್ಯೆ 10 ಲಕ್ಷ ತಲುಪುವ ಅಂದಾಜಿದೆ. ಅಂತಹ ಪರಿಸ್ಥಿತಿಯಲ್ಲಿ, ಅಯೋಧ್ಯೆಯು ಬಹುದೊಡ್ಡ ನಗರೀಕರಣಕ್ಕೆ ಒಳಗಾಗಲಿದೆ. ಸದ್ಯ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾತ್ರವಲ್ಲದೆ 250ಕ್ಕೂ ಹೆಚ್ಚು ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಅಯೋಧ್ಯೆಗೆ ಕೆಲವು ವಿಭಿನ್ನ ಉಡುಗೊರೆಗಳನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಅಯೋಧ್ಯೆಗೆ ಹೊಸ ರೈಲಿನ ಘೋಷಣೆ ನಿರೀಕ್ಷೆ
ಸಾಮಾನ್ಯವಾಗಿ ಮಧ್ಯಂತರ ಬಜೆಟ್ನಲ್ಲಿ ಸರ್ಕಾರಗಳು ಹೊಸ ಮತ್ತು ದೊಡ್ಡ ಘೋಷಣೆಗಳನ್ನು ಮಾಡದಿದ್ದರೂ ಕಳೆದ ಕೆಲವು ಮಧ್ಯಂತರ ಬಜೆಟ್ಗಳಲ್ಲಿ ಈ ಸಂಪ್ರದಾಯವನ್ನು ಮುರಿಯಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಅಯೋಧ್ಯೆಗೆ ಸಾಕಷ್ಟು ಕೊಡುಗೆ ನೀಡುವಂತಹ ಸಾಧ್ಯತೆಗಳಿವೆ. ರೈಲ್ವೆ ಬಜೆಟ್ ಈಗ ಮುಖ್ಯ ಬಜೆಟ್ನ ಭಾಗವಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಅಯೋಧ್ಯೆಗೆ ಹೊಸ ರೈಲನ್ನು ಘೋಷಿಸುವ ನಿರೀಕ್ಷೆಯೂ ಇದೆ.
ಇದಲ್ಲದೆ, ದೇಶದ ಯಾತ್ರಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಈಗಾಗಲೇ ಯೋಜನೆಯನ್ನು ಪ್ರಾರಂಭಿಸಿದೆ. ಮೋದಿ ಸರ್ಕಾರದ ‘ಅಮೃತ್ ಯೋಜನೆ’ ಕೂಡ ನಗರಗಳ ನವೀಕರಣಕ್ಕಾಗಿ ಕೆಲಸ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿರ್ಮಲಾ ಅವರು ಈ ಎರಡೂ ಯೋಜನೆಗಳ ಮೂಲಕ ಅಯೋಧ್ಯೆಗೆ ದೊಡ್ಡ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.
ಬಜೆಟ್ನಲ್ಲಿ ಘೋಷಣೆಯಾಗದಿದ್ದರೂ ಅಯೋಧ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಭಾಗ್ಯ ದೊರೆತಿದೆ. ಇದಕ್ಕೂ ಮುನ್ನ ಅಯೋಧ್ಯೆಯಲ್ಲಿ ‘ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದೀಗ ಅತಿ ವೇಗದಲ್ಲಿ ಕಾಮಗಾರಿ ಮುಗಿದು ದಾಖಲೆ ಮಾಡಿದೆ. ಆದರೆ, ಈಗ ಅದರ ಹೆಸರನ್ನು ‘ಮಹರ್ಷ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬದಲಾಯಿಸಲಾಗಿದೆ. ಬಹುಶಃ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದ ಮತಗಳನ್ನು ಪಡೆಯಲು ಇದು ಬಿಜೆಪಿಗೆ ನೆರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.