ಇತ್ತೀಚಿನ ಸುದ್ದಿರಾಜ್ಯ

ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭೆ ಚುನಾವಣೆ: ಡಿಕೆ ಶಿವಕುಮಾರ್ ಘೋಷಣೆ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಮಧ್ಯೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ, ಅವರ (ಸಿದ್ದರಾಮಯ್ಯ) ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ. ಅದರಲ್ಲಿ ಅನುಮಾನ ಬೇಡ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ನಮ್ಮ‌ ಸರ್ಕಾರ ಬಲಿಷ್ಠವಾಗಿದೆ. ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ನಮ್ಮ ರಾಜ್ಯದ ಮುಖ್ಯಮಂತ್ರಿ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ನಾವಿಬ್ಬರು ಸೇರಿ ಒಟ್ಟಿಗೆ ಚುನಾವಣೆ ಮಾಡುತ್ತೇವೆ.ಆದ್ರೆ, ಅವರ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ, ಅದರಲ್ಲಿ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎನ್ನುವುದು ಬಹಿರಂಗವಾಗಿದೆ.

ಇನ್ನು ಇದೇ ವೇಳೆ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಯತೀಂದ್ರ ಹೇಳಿಕೆ ಪ್ರತಿಕ್ರಿಯಿಸಿದ ಡಿಕೆಶಿ, ಆಸೆ ಪಡುವುದು, ಹೇಳೋದು, ಜನರಿಗೆ ಮನವಿ ಮಾಡುವುದು ಸಾಮಾನ್ಯ. ನಾನು ನನ್ನೂರಿಗೆ ಹೋದಾಗ ನನಗೆ ಶಕ್ತಿ ಕೊಡಿ ಎಂದು ಕೇಳುತ್ತೇನೆ. ಅದು ಸ್ವಾಭಾವಿಕ, ಬೇರೆ ರೀತಿ ಯಾಕೆ ಟ್ವಿಸ್ಟ್ ಮಾಡಬೇಕು. ಯತೀಂದ್ರ ಸೂಕ್ಷ್ಮ ವ್ಯಕ್ತಿ, ಉದ್ಬವ ಆಗುತ್ತಿರುವ ನಾಯಕ. ನಾವು ಅವರಿಗೆ ಸಹಕಾರ ಕೊಡೋಣ. ಬಿಜೆಪಿಯವರು ಅವರ ಪಕ್ಷವನ್ನ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಎಲ್ಲರ ಅಚ್ಚರಿಗೆ ಕಾರಣವಾದ ಡಿಕೆಶಿ ಹೇಳಿಕೆ

ಹೌದು.. ಸಿದ್ದರಾಂಯ್ಯನವರ ನೇತೃತ್ವದಲ್ಲೇ ಈ ಬಾರಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ಕಾಂಗ್ರೆಸ್​ನ ನಾಯಕರಿಗೆ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ, ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬಂದ ಬಳಿಕ ಮುಖ್ಯಮಂತ್ರಿ ಹುದ್ದೆ ತಮಗೆ ನೀಡಲೇಬೇಕೆಂದು ಹೈಕಮಾಂಡ್ ಬಳಿ ಡಿಕೆ ಶಿವಕುಮಾರ್ ಪಟ್ಟು ಹಿಡಿದು ಕುಳಿತ್ತಿದ್ದರು. ಕೊನೆಗೆ ಹೈಕಮಾಂಡ್ ನಾಯಕರು ಎಲ್ಲರೂ ಸೇರಿ ಡಿಕೆ ಶಿವಕುಮಾರ್ ಅವರನ್ನು ಮನವೊಲಿಸಿ ಡಿಸಿಎಂಗೆ ಒಪ್ಪಿಸಿದ್ದರು. ಬಳಿಕ ಮುಂದಿನ ಎರಡು ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಬೇಕೆಂದು ಒಳಗೊಳಗೆ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್, ಇದೀಗ ಅಚ್ಚರಿ ಎಂಬಂತೆ ಈ ಬಾರಿ ಲೋಕಸಭಾ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button