ಅನುದಾನಿತ ಶಾಲೆಗಳಲ್ಲಿ 7 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ, ವಿದ್ಯಾರ್ಥಿಗಳಿಗೆ ಸಮಸ್ಯೆ:
ರಾಜ್ಯದಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಏಳು ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ ಇದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆ ಅದ್ಯಕ್ಷ ವೈಹೆಚ್ ಹುಚ್ಚಯ್ಯ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋರ್ಟ್ ಆದೇಶವಿದ್ದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶಿಕ್ಷಕರ ನೇಮಕ ಮಾಡಲು ಸರ್ಕಾರ 2015 ರಿಂದ ಅವಕಾಶ ನೀಡುತ್ತಿಲ್ಲ. 7,129 ಶಿಕ್ಷಕರ ಕೊರತೆ ನಮ್ಮನ್ನು ಕಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇಂಗ್ಲಿಷ್ ಹಾಗೂ ಗಣಿತ ಶಿಕ್ಷಕರು ಇಲ್ಲದೇ ಸಮಸ್ಯೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಹೊಡೆತ ನೀಡಿದೆ. ಶಿಕ್ಷಕರು ಇಲ್ಲದೇ ಅನೇಕ ಶಾಲೆಗಳು ಮುಚ್ಚಿವೆ. ಆದರೂ ಸರ್ಕಾರ ನಮಗೆ ಶಿಕ್ಷಕರ ನೇಮಕಕ್ಕೆ ಅವಕಾಶ ಮಾಡಿ ಕೊಟ್ಟಿಲ್ಲ ಎಂದರು.
ಶಿಕ್ಷಣ ಮಸೂದೇ ಆಧಾರದ ಮೇಲೆ ಖಾಸಗಿಯಾಗಿ ಶಾಲೆ ನಡೆಸಲು ಅವಕಾಶ ಇದೆ ಎಂದು ಹೇಳಿದ ಹುಚ್ಚಯ್ಯ, ನಿವೃತ್ತಿ ಹಾಗೂ ರಾಜೀನಾಮೆ ಹಾಗೂ ಮರಣದಿಂದ ಶಿಕ್ಷಕರ ಕೊರತೆಯಾಗಿದೆ. ನೇಮಕಾತಿಗೆ ಯಾವುದೇ ಬಜೆಟ್ ಅವಶ್ಯಕತೆ ಇಲ್ಲ. ನಾವು ನೇಮಕಾತಿ ವಿಚಾರವಾಗಿ ಹೈಕೋರ್ಟ್ ಹೋಗಿದ್ದೇವೆ. ಕೋರ್ಟ್ ಕೂಡ ಶಿಕ್ಷಕರ ನೇಮಕಾತಿ ಮಾಡಲು ಅನುಮತಿ ನೀಡಿದೆ. ಆದರೆ ಇಲಾಖೆ ಹಾಗೂ ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ ಎಂದರು.
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಆರೋಪಿಸಿದ ಹುಚ್ಚಯ್ಯ, ಶಿಕ್ಷಣ ಇಲಾಖೆಯಿಂದ ಎಲ್ಲಾ ಸಂಸ್ಕಾರ ಬೆಳೆಯುತ್ತದೆ. ಆದರೆ ಶಿಕ್ಷಣ ಇಲಾಖೆಯಲ್ಲೂ ದುಡ್ಡು ನೀಡದೇ ಹೋದರೆ ಏನೂ ಆಗುವುದಿಲ್ಲ. ಇದನ್ನು ಮೊದಲು ಸರಿ ಪಡಿಸಬೇಕು. ಇಲ್ಲವಾದರೆ ನಾವು ಬೀದಿಗಿಳಿಯಲು ಸಜ್ಜಾಗಿದ್ದೇವೆ ಎಂದರು.