ಉಡುಪಿ: ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ದಿನಗಣನೆ,
ಉಡುಪಿ, ಜನವರಿ 8: ರಾಜ್ಯದ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ಮಠದ ಪರ್ಯಾಯ ಹತ್ತಿರವಾಗುತ್ತಲೇ ಅಸಮಾಧಾನ ಸ್ಫೋಟಗೊಳ್ಳುವ ಸುಳಿವೂ ಸಿಕ್ಕಿದೆ. ಈ ಬಾರಿಯ ಪರ್ಯಾಯ ಪೀಠವನ್ನು ಪುತ್ತಿಗೆ ಶ್ರೀಗಳು ಏರಲಿದ್ದು, ಭಾವಿ ಪೀಠಾಧೀಶರ ಪುರ ಪ್ರವೇಶಕ್ಕೂ ಮುನ್ನವೇ ಭಿನ್ನಮತ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಪರ್ಯಾಯ ಉತ್ಸವದಿಂದ ಇತರೆ ಮಠಾಧೀಶರು ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಇತರ ಮಠಗಳ ಶ್ರೀಗಳು ಗೈರಾದರೆ 2008ರ ಇತಿಹಾಸ ಪುನರಾವರ್ತನೆಯಾಗಲಿದೆ.
2008 ರಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ವಿರೋಧ ವ್ಯಕ್ತವಾದಾಗ ಶೀರೂರು ಶ್ರೀಗಳು ಅವರ ಜೊತೆ ನಿಂತಿದ್ದರು. ಉಳಿದ 6 ಮಠಾಧೀಶರು ಪರ್ಯಾಯದಿಂದ ಅಂತರ ಕಾಯ್ದುಕೊಂಡಿದ್ದರು. ಈ ಮಠಾಧೀಶರೆಲ್ಲ ಈ ಬಾರಿ ಮತ್ತೆ ಪುತ್ತಿಗೆ ಶ್ರೀಗಳ ಪರ್ಯಾಯಕ್ಕೆ ಗೈರಾಗುವ ಸಾಧ್ಯತೆ ಹೆಚ್ಚಾಗಿದೆ.
ಉಡುಪಿ ಅಷ್ಟ ಮಠಗಳ ಪರಂಪರೆಯಂತೆ ಅಲ್ಲಿನ ಶ್ರೀಗಳು ಸಮುದ್ರೋಲ್ಲಂಘನೆ ಮಾಡುವಂತಿಲ್ಲ. ಆದರೆ, ಪುತ್ತಿಗೆ ಶ್ರೀಗಳು ಸಮುದ್ರೋಲ್ಲಂಘನೆ ಮಾಡಿ ವಿದೇಶ ಪ್ರವಾಸ ಕೈಗೊಂಡಿದ್ದರಿಂದ ಅವರ ಪರ್ಯಾಯ ಪೀಠಾರೋಹಣಕ್ಕೆ 2008ರಲ್ಲಿ ಇತರ ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದರು.
2008ರಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣ ಸಂದರ್ಭದಲ್ಲಿ ದರ್ಬಾರ್, ಕೀ ಹಸ್ತಾಂತರ ಹಾಗೂ ಅಕ್ಷಯ ಪಾತ್ರೆ ಹಸ್ತಾಂತರದಲ್ಲಿಯೂ ಅಸಮಾಧಾನ ವ್ಯಕ್ತವಾಗಿತ್ತು. ಏಕೈಕ ಶೀರೂರು ಮಠವಷ್ಟೇ ಪುತ್ತಿಗೆ ಮಠದ ಪರ ನಿಂತಿತ್ತು.
ಉಡುಪಿಯ ಕೃಷ್ಣ ದೇಗುಲದಲ್ಲಿ 8 ಮಠಗಳು ಇದ್ದು, ಕೃಷ್ಣಾಪುರ ಮಠಾಧೀಶರು ಹಾಲಿ ಪರ್ಯಾಯ ಪೀಠಾಧಿಪತಿ ಆಗಿದ್ದಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದ ವೇಳೆ ಎರಡು ವರ್ಷಗಳ ಕಾಲ ಕೃಷ್ಣನ ಸೇವೆ ಮಾಡುವ ಜವಾಬ್ದಾರಿಯನ್ನು ಮತ್ತೊಂದು ಮಠಕ್ಕೆ ಬಿಟ್ಟುಕೊಡಲಾಗುತ್ತದೆ. ಸರದಿಯಂತೆ ಅಷ್ಟ ಮಠಗಳ ಯತಿಗಳು ಎರಡು ವರ್ಷ ಕಾಲ ಶ್ರೀಕೃಷ್ಣನ ಪೂಜೆ, ಸೇವೆ ಮಾಡುತ್ತಾ ಬರುತ್ತಾರೆ.