ಅಲ್ಪಸಂಖ್ಯಾತರ ಬಗ್ಗೆ ಯಾವುದೇ ತಾರತಮ್ಯ ಭಾವನೆ ಇಲ್ಲ: ಪ್ರಧಾನಿ ಮೋದಿ
ದೆಹಲಿ : ಭಾರತದಲ್ಲಿ “ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಯಾವುದೇ ತಾರತಮ್ಯ ಭಾವನೆ ಇಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಬ್ರಿಟಿಷ್ ಪತ್ರಿಕ ಫೈನಾನ್ಶಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಮುಸಲ್ಮಾನರ ಭವಿಷ್ಯದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ದೇಶದ “ಸ್ಥಿತಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿದ್ದು, 2014 ರಲ್ಲಿ ಅವರು ಅಧಿಕಾರಕ್ಕೆ ಬಂದ ನಂತರ ಇಸ್ಲಾಮಿಕ್ ವಿರೋಧಿ ಭಾವನೆಗಳು ಮತ್ತು ದ್ವೇಷದ ಮಾತುಗಳು ಪ್ರವರ್ಧಮಾನಕ್ಕೆ ಬಂದಿವೆ ಎಂದು ಹೇಳುವ ವಿದೇಶಿ ಮತ್ತು ದೇಶೀಯ ವಿಮರ್ಶಕರ ವಾದವನ್ನು ತಳ್ಳಿ ಹಾಕಿದ್ದಾರೆ.
ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ಕೇಳಿದಾಗ ಪ್ರಧಾನಿ ಮೋದಿ, ಭಾರತೀಯ ಸಮಾಜವು ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಭಾವನೆ ಹೊಂದಿಲ್ಲ. ದೇಶದ ಪಾರ್ಸಿ ಸಮುದಾಯದ ಆರ್ಥಿಕ ಯಶಸ್ಸನ್ನು ಶ್ಲಾಘಿಸಿದ ಮೋದಿ ಪ್ರಸ್ತುತ ಸಮುದಾಯವನ್ನು “ಭಾರತದಲ್ಲಿ ವಾಸಿಸುವ ಧಾರ್ಮಿಕ ಸೂಕ್ಷ್ಮ-ಅಲ್ಪಸಂಖ್ಯಾತರು” ಎಂದು ಹೇಳಿದ್ದಾರೆ.
“ಜಗತ್ತಿನ ಬೇರೆಡೆ ಕಿರುಕುಳವನ್ನು ಎದುರಿಸುತ್ತಿದ್ದರೂ, ಅವರು (ಪಾರ್ಸಿಗಳು) ಭಾರತದಲ್ಲಿ ಸುರಕ್ಷಿತ ಧಾಮವನ್ನು ಕಂಡುಕೊಂಡಿದ್ದಾರೆ. ಅವರು ಸಂತೋಷದಿಂದ ಬದುಕುತ್ತಿದ್ದಾರೆ ಎಂದು ಹೇಳಿದ ಮೋದಿ, ದೇಶದ ಸರಿಸುಮಾರು 200 ಮಿಲಿಯನ್ ಮುಸ್ಲಿಮರ ಬಗ್ಗೆ ಯಾವುದೇ ನೇರ ಉಲ್ಲೇಖವನ್ನು ಮಾಡಲಿಲ್ಲ.
ಸರ್ಕಾರದ ಟೀಕಾಕಾರರ ಮೇಲೆ ಆಪಾದಿತ ದಬ್ಬಾಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರಧಾನಿಯ ಉತ್ತರ ನಗು ಆಗಿತ್ತು ಎಂದು ಎಫ್ಟಿ ಹೇಳಿದೆ. ವಿರೋಧ ಪಕ್ಷಗಳ ಮೇಲೆ ಹೊರಿಸಲಾಗುವ ಟೂಲ್ ಕಿಟ್ ಮತ್ತು ಟುಕ್ಡೇ ಟುಕ್ಡೇ ಆರೋಪದ ಬಗ್ಗೆ ಕೇಳಿದಾಗ, ನಮ್ಮ ದೇಶದಲ್ಲಿ ಲಭ್ಯವಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಇಡೀ ಪರಿಸರ ವ್ಯವಸ್ಥೆಯು ಪ್ರತಿದಿನ ಸಂಪಾದಕೀಯಗಳು, ಟಿವಿ ಚಾನೆಲ್‌ಗಳು, ಸಾಮಾಜಿಕ ಮಾಧ್ಯಮಗಳು, ವೀಡಿಯೊಗಳು, ಟ್ವೀಟ್‌ಗಳು ಇತ್ಯಾದಿಗಳ ಮೂಲಕ ಈ ಆರೋಪಗಳನ್ನು ನಮ್ಮ ಮೇಲೆ ಎಸೆಯಲು ಬಳಸುತ್ತಿದೆ” ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.
ಅವರಿಗೆ ಹಾಗೆ ಮಾಡುವ ಹಕ್ಕಿದೆ. ಆದರೆ ಸತ್ಯಗಳೊಂದಿಗೆ ಪ್ರತಿಕ್ರಿಯಿಸಲು ಇತರರಿಗೆ ಸಮಾನ ಹಕ್ಕಿದೆ ಎಂದಿದ್ದಾರೆ ಪ್ರಧಾನಿ. ದೆಹಲಿಯ ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಎಫ್‌ಟಿಯೊಂದಿಗೆ ಮಾತನಾಡಿದ ಮೋದಿ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಬಿಜೆಪಿಯ ಪ್ರಾಬಲ್ಯ ಪ್ರದರ್ಶನದ ಹಿನ್ನೆಲೆಯಲ್ಲಿ, ತಮ್ಮ ಸರ್ಕಾರವು ದೀರ್ಘಕಾಲದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಕಿತ್ತುಹಾಕುತ್ತಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿದರು.