ಇತ್ತೀಚಿನ ಸುದ್ದಿದೇಶ

ಪ್ರಧಾನಿ ಮೋದಿ ಭೇಟಿಯಾದ ಎಚ್‌ಡಿ ದೇವೇಗೌಡ ಅಂಡ್‌ ಸನ್ಸ್‌

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿ ಸಂಸತ್‌ ಭವನದ ಪ್ರಧಾನಿಗಳ ಕಾರ್ಯಾಲಯದಲ್ಲಿ ನಡೆಯಿತು. ಪ್ರಧಾನಿಗಳ ಕಾರ್ಯಾಲಯಕ್ಕೆ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು ಆಗಮಿಸಿದರು. ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಮಾಜಿ ಸಂಸದರಾದ ಕುಪೇಂದ್ರ ರೆಡ್ಡಿ, ಸಂಸದರಾದ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿ.ಎನ್.ಬಾಲಕೃಷ್ಣ ಜತೆಯಲ್ಲಿದ್ದರು. ನಾಯಕರ ಜತೆ ಪ್ರಧಾನಿಗಳು ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ” ರಾಜ್ಯ ರಾಜಕೀಯ ಪರಿಸ್ಥಿತಿಯ ಜತೆಗೆ ಕೊಬರಿ ಖರೀದಿ, ಕಾಡುಗೊಲ್ಲ ಜಾತಿಗೆ ಮೀಸಲಾತಿ ಸೌಲಭ್ಯ‌ ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿಗಳು ಮೋದಿ ಅವರ ಜತೆ ಚರ್ಚೆ ನಡೆಸಲಾಗಿದೆ. ಇದೇ ವೇಳೆ ಕೊಬರಿಗೆ ಬೆಂಬಲ ಬೆಲೆ ನೀಡುವುದು ಹಾಗೂ ನಾಫೆಡ್‌ ಮೂಲಕ ಖರೀದಿ ಮಾಡಬೇಕು ಎಂಬ ಬಗ್ಗೆ ಪ್ರಧಾನಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಾಡುತ್ತಾರೆ

ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ? ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ ಅವರು, ” ನಿಖಿಲ್ ಅವರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಜನರು ಚುನಾವಣೆಗೆ ನಿಲ್ಲಿ ಎಂದು ಹೇಳುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿ ಎಂದು ಬಯಸುತ್ತಿದ್ದಾರೆ. ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ, ಜನರ ಅನುಕಂಪವೂ ಇದೆ. ಆದರೆ, ಅವರಿಗೆ ಸ್ಪರ್ಧೆ ಮಾಡುವ ಉದ್ದೇಶವಿಲ್ಲ ” ಎಂದು ತಿಳಿಸಿದರು.

ಜನವರಿ ಅಂತ್ಯದ ಹೊತ್ತಿಗೆ ಕ್ಷೇತ್ರ ಹಂಚಿಕೆ

” ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ. ಆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಒಂದು ಕ್ಷೇತ್ರ ಹೆಚ್ಚೂ ಕಡಿಮೆ ಆಗಬಹುದು ಅಷ್ಟೇ. ಅದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಖ್ಯವಾಗಿ ಪರಸ್ಪರ ವಿಶ್ವಾಸ ಬೇಕು ಅಷ್ಟೇ, ಅದನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇನೆ. ಜನವರಿ ಅಂತ್ಯದ ಒಳಗೆ ನಾವು ಎಲ್ಲಾ ನಿರ್ಧಾರ ಮಾಡುತ್ತೇವೆ ಎಂದರು.

ಗೆಲ್ಲುವ ಕಡೆಯಷ್ಟೇ ಟಿಕೆಟ್‌ ಕೇಳುತ್ತೇವೆ

ನೀವು ಎಷ್ಟು ಕ್ಷೇತ್ರ ಕೇಳುತ್ತಿದ್ದೀರಿ? ಎನ್ನುವ ಪ್ರಶ್ನೆಗೂ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು,” ನಾವು ಎಷ್ಟು ಗೆಲ್ಲುತ್ತೇವೆ ಎನ್ನುವ ಕಡೆಯಷ್ಟೇ ನಾವು ಕೇಳುತ್ತೇವೆ. ನಾವು ಎಲ್ಲೆಲ್ಲಿ ಗೆಲ್ಲುತ್ತೇವೆ ಅಂತ ನಮ್ಮ ಬಳಿ ರಿಪೋರ್ಟ್ ಇದೆ. ಆ ರಿಪೋರ್ಟ್ ಪ್ರಕಾರ ನಾವು ಕೆಲಸ ಮಾಡುತ್ತೇವೆ. ಇಲ್ಲಿ ಸೀಟ್ ಹಂಚಿಕೆ ಒಂದೇ ಪ್ರಮುಖ ಅಲ್ಲಾ. ನಾವು ಪರಸ್ಪರ ವಿಶ್ವಾಸ, ನಂಬಿಕೆಯಿಂದ ಕೆಲಸ ಮಾಡುತ್ತೇವೆ. ಮೂರನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ” ಎಂದು ತಿಳಿಸಿದರು.

ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಎಂದ ಎಚ್‌ಡಿಕೆ

ತಮ್ಮ ಸ್ಪರ್ಧೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಅವರು, ” ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನನ್ನ ಮುಂದೆ ಇಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬರುತ್ತಿದೆ. ಅದು ನಮ್ಮ ಜನರು, ಕಾರ್ಯಕರ್ತರು ಹಾಗೆ ಭಾವನೆ ಮಾಡುವುದಕ್ಕೆ ಕಾರಣವಾಗಿದೆ. ನಾನೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ. ನಾನು ಇಲ್ಲಿಯೇ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎನ್ನುವುದು ಅನೇಕ ಜನರ ಅಭಿಪ್ರಾಯ, ನನ್ನ ಅಭಿಪ್ರಾಯವೂ ಅದೇ ಆಗಿದೆ. ನಾನು ಕರ್ನಾಟಕದಲ್ಲೇ ಇರಲು ತೀರ್ಮಾನ ಮಾಡಿದ್ದೇನೆ ” ಎಂದರು.

ಕುಮಾರಸ್ವಾಮಿ ಅವರು ಸೆಂಟ್ರಲ್ ಮಿನಿಸ್ಟರ್ ಆಗ್ತಾರಾ? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಕುಮಾರಸ್ವಾಮಿ ಅವರು, ” ಯಾರ ಹಣೆಯ ಮೇಲೆ ಏನ್ ಬರೆದಿದೆಯೋ ಅಂತ ಗೊತ್ತಿಲ್ಲಾ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡೋಣ, ಮುಂದೆ ಏನೇನು ನಡೆಯುತ್ತೋ ” ಎಂದರು.

ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ಹಾಗೂ ಲೋಕಸಭೆ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರಕಾರ ಉರುಳುತ್ತಾ ಎನ್ನುವ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ” ಕರ್ನಾಟದ ರಾಜಕೀಯದಲ್ಲಿ ಶಿಂಧೆಯೂ ಇದ್ದಾರೆ, ಅಜೀತ್ ಪವಾರ್ ಸಹ ಇದ್ದಾರೆ. ಯಾರು ಮೊದಲು ಮುಂದೆ ಬರುತ್ತಾರೋ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ” ಉತ್ತರ ಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button