ಸಿಪಿ ಯೋಗೇಶ್ವರ ಭಾವ ನಾಪತ್ತೆ
ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಕಾಣೆಯಾಗಿದ್ದು, ಎರಡ್ಮೂರು ದಿನ ಕಳೆದರೂ ಸಹ ಇದುವರೆಗೂ ಅವರ ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಇದೀಗ ಅವರ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮ ಬಳಿ ಪತ್ತೆಯಾಗಿದೆ. ಆದ್ರೆ, ಕಾರಿನ ಟೈ ಲ್ಯಾಂಪ್ ಬಳಿ ರಕ್ತದ ಕಲೆ ಇದ್ದು, ಸ್ಥಳಕ್ಕೆ ಫಾರೆನ್ಸಿಕ್ ಹಾಗೂ ರಾಮನಗರ ಪೊಲೀಸ್ ತನಿಖಾ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಅವರು ಡಿಸೆಂಬರ್ 2ರಂದು ಏಕಾಏಕಿ ನಾಪತ್ತೆಯಾಗಿದ್ದರು. ಆದ್ರೆ, ಎರಡು ದಿನದ ಬಳಿಕ ಇದೀಗ ಮಹದೇವಯ್ಯ ಅವರ ಕಾರು ನಿನ್ನೆ(ಡಿಸೆಂಬರ್ 03) ಹನೂರು ತಾಲೂಕಿನ ರಾಮಾಪುರದಲ್ಲಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ರಾಮನಗರ ಪೊಲೀಸ್ ತನಿಖಾ ತಂಡಕ್ಕೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಈ ವೇಳೆ ಕಾರಿನಲ್ಲಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ಇದರಿಂದ ಆತಂಕಕ್ಕೆ ಕಾರಣವಾಗಿದೆ.
ಸದ್ಯ ಹದೇವಯ್ಯ ಕಾರು ರಾಮಾಪುರ ಪೊಲೀಸ್ ಠಾಣೆಯಲ್ಲಿದ್ದು, ಕಾರು ರಾಮಾಪುರಕ್ಕೆ ಬಂದಿದ್ಯಾಕೆ? ಹೇಗೆ ಬಂದಿದೆ? ಯಾರು ಚಲಾಯಿಸಿಕೊಂಡು ಬಂದಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿತ್ತಿದ್ದಾರೆ.
ಇನ್ನು ಅನುಮಾನಸ್ಪದವಾಗಿ ನಾಪತ್ತೆಯಾಗಿರುವ ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeshwar) ಅವರ ಭಾವನೂ ಆಗಿರುವ ಉದ್ಯಮಿ ಹಾಗೂ ಮೆಗಾಸಿಟಿ ನಿರ್ದೇಶಕ ಮಹದೇವಯ್ಯ ಅವರ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಮಹದೇವಯ್ಯ ಪತ್ತೆಗೆ ಚನ್ನಪಟ್ಟಣ ಡಿವೈಎಸ್ಪಿ ನೇತೃತ್ವದ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಮಹದೇವಯ್ಯ ಅವರ ಮೊಬೈಲ್ ಲೊಕೇಷನ್ ಪರಿಶೀಲನೆ ಮಾಡಲಾಗುತ್ತಿದೆ. ಆದ್ರೆ, ಒಂದು ಬಾರಿ ಯಾರೋ ಕರೆ ಸ್ವೀಕರಿಸಿ ಮಾತನಾಡಿದ್ದರು. ಬಳಿಕ ಮೊಬೈಲ್ ಮತ್ತೆ ಸ್ವಿಚ್ ಆಫ್ ಆಗಿದೆ.