ಇತ್ತೀಚಿನ ಸುದ್ದಿ

ಈ ಗೋವಿಂದ ಬಾಬು ಪೂಜಾರಿ ಯಾರು ?

ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಎಲ್ಲರ ಮನದಲ್ಲಿ ಮೂಡಿದ ಪ್ರಶ್ನೆ ಎಂದರೆ ಯಾರೀ ಗೋವಿಂದ ಪೂಜಾರಿ ಎಂದು. ಕುಂದಾಪುರದ ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ, ಬಾಲ್ಯದಿಂದಲೇ ಏಳು ಬೀಳುಗಳನ್ನು ಕಂಡವರು.

ತನ್ನ 13ನೇ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಅವರು, ಹೋಟೆಲ್ ಒಂದರಲ್ಲಿ ಚಹಾ ಮಾಡುವ ಮೂಲಕ ವೃತ್ತಿ ಬದುಕು ಆರಂಭಸಿದರು. ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು. ನಂತರ ಇರ್ಲಾದ ಸನ್ನಿ ಬಾರ್​ನಲ್ಲಿ ಬಾಣಸಿಗನಾಗಿ ಮುಂದೆ ಸ್ವ ಉದ್ಯೋಗದ ಕನಸಿನೊಂದಿಗೆ ಜನರಲ್ ಸ್ಟೋರ್ ಒಂದನ್ನು ತೆರೆದರು. ಆದರೆ ಇದು ಕೈ ಹಿಡಿಯಲಿಲ್ಲ.

ಇದರಿಂದ ಸಾಕಷ್ಟು ನಷ್ಟ ಅನುಭವಿಸಿದರು. ಮತ್ತೆ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಕ್ಲೀನಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ ಗೋವಿಂದ ಅವರು 2007 ರಲ್ಲಿ ಏಳು ಮಂದಿ ನೌಕರರೊಂದಿಗೆ ಷೆಫ್ ಟಾಕ್ ಕೇಟರಿಂಗ್ ಸರ್ವಿಸಸ್ ಸಂಸ್ಥೆಯನ್ನು ಕಟ್ಟಿದರು. ಮುಂದೆ ಇದು ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಆಗಿ ಬದಲಾಯಿತು.

ಪ್ರಸ್ತುತ ಪೂಜಾರಿ ಅವರು ತಮ್ಮ ಸಂಸ್ಥೆಯ ಮೂಲಕ 5,000 ಜನರಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್‌ನಲ್ಲಿ ಸಂಸ್ಥೆ, ಅತ್ಯಾಧುನಿಕ ಕಿಚನ್‌ಗಳನ್ನು ಹೊಂದಿದ್ದು, ವಿವಿಧ ಕಾರ್ಪೊರೇಟ್ ಕಂಪನಿಗಳಿಗೆ ಕೇಟರಿಂಗ್ ಸೇವೆ ಒದಗಿಸುತ್ತಿದ್ದಾರೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್​ಗಳನ್ನು ತಯಾರಿಸುವ ಕಂಪನಿಯನ್ನು ಆರಂಭಿಸಿದರು.

ಇದರೊಂದಿಗೆ ಪ್ರಗ್ನ್ಯಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥಗೆಳನ್ನು ಸ್ಥಾಪಿಸಿ ಇದರಿಂದ ವರ್ಷಕ್ಕೆ ನೂರಾರು ಕೋಟಿ ವಹಿವಾಟು ನಡೆಸುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಸದ್ಯ ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಕೀಯ ರಂಗಕ್ಕೂ ಲಗ್ಗೆ ಇಡಲು ಮುಂದಾದ ಗೋವಿಂದ ಅವರಿಗೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಅವರು ಹಂತಹಂತವಾಗಿ ಒಟ್ಟು ಐದೂವರೆ ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button