ಇತ್ತೀಚಿನ ಸುದ್ದಿ

ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಯಲ್ಲಿಯೂ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ – ಜಿ ಟಿ ದೇವೇಗೌಡ

ಬೆಂಗಳೂರು: ಲೋಕಸಭೆ ಚುನಾವಣೆಯ ಮಾತ್ರವಲ್ಲ.. ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ​ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲಿದ್ದು, ಮೈತ್ರಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯಿತಿನಲ್ಲಿ ಜೆಡಿಸ್ ಬಿಜೆಪಿ ಜೊತೆ ಸೇರಿ ಅಧಿಕಾರ ಹಿಡಿಯುತ್ತದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಬಿಜೆಪಿಗೆ ಇದೆ, ನಾವು ಅವರು ಒಟ್ಟಾಗುತ್ತೇವೆ ಎಂದು ಜೆಡಿಎಸ್ ಸಮಾವೇಶದಲ್ಲಿ ಮೈತ್ರಿ ಬಗ್ಗೆ ಜಿ ಟಿ ದೇವೇಗೌಡ ಘೋಷಿಸಿದರು. ಮೋದಿ ಪ್ರಧಾನಿಯಾಗುವುದು ನಿಶ್ಚಿತ. 130 ವರ್ಷದ ಕಾಂಗ್ರೆಸ್ ದೂಳಿಪಟ ಆಗೋದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, ಕುದುರೆ ಚೆನ್ನಾಗಿದ್ದರೆ ಖರೀದಿ ಮಾಡುವವನು ಮನೆಗೆ ಬರ್ತಾನೆ, ಮಾರ್ಕೆಟ್​ಗೆ ಹೋಗುವ ಅವಶ್ಯಕತೆ ಇಲ್ಲ, ಜನತಾದಳ ಸ್ಪಷ್ಟವಾಗಿದೆ. ಜೆಡಿಎಸ್ 19 ರಿಂದ 120 ಸ್ಥಾನವಾಗೋದು ಕಷ್ಟವಲ್ಲ. ಸರ್ಕಾರದ ಪರಿಸ್ಥಿತಿ ಹೇಗಿದೆ ಅಂದರೆ ಡಿಸೆಂಬರ್‌ನಲ್ಲಿ ಸಂಬಳ ಕೊಡೋಕೆ ಆಗದೆ ಇರುವ ಪರಿಸ್ಥಿತಿ ಬಂದಿದೆ. ಬಸವಣ್ಣ, ಅಂಬೇಡ್ಕರ್ ಸಿದ್ಧಾಂತದಲ್ಲಿ ಜೆಡಿಎಸ್‌ ಇದೆ. ನಮಗೆ ಯಾರ ಜೊತೆ ಕೂಡ ಮೈತ್ರಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಆದರೆ ಯಾರು ಮುಂದೆ ಬಂದು ನಮಗೆ ಗೌರವ ಕೊಡ್ತಾರೋ ಅವರನ್ನು ಸ್ವಾಗತ ಮಾಡುತ್ತೇವೆ ಎಂದರು.

ಕೋರ್ ಕಮಿಟಿ ಸಂಚಾಲಕ ವೈ ಎಸ್ ವಿ ದತ್ತಾ ಮಾತನಾಡಿ, ಪ್ರಾದೇಶಿಕ ಪಕ್ಷಕ್ಕೆ ಆ ಸಿದ್ಧಾಂತ ಈ ಸಿದ್ಧಾಂತ ಅಂತ ಕಲಬೆರಕೆಯಾಗಿದೆ. ಶಿವಸೇನೆಯವರು ಕಾಂಗ್ರೆಸ್ ಜೊತೆ ಸೇರಿದ್ದಾರೆ. ಪ್ರಾದೇಶಿಕ ಪಕ್ಷವಾದ ನಮ್ಮ ಬದ್ಧತೆ ನೆಲ, ಜಲ ಅನ್ನೋದೆ ನಮ್ಮ ಸಿದ್ಧಾಂತ. ನಮ್ಮ ಸಿದ್ಧಾಂತವೇ ನಮ್ಮ ಶಕ್ತಿ, ಪ್ರಾದೇಶಿಕ ಪಕ್ಷ ಕಟ್ಟುವುದು ಬಹಳ ಕಷ್ಟ, ದೇವೇಗೌಡರು ಹಾಗೂ ಕುಮಾರಸ್ವಾಮಿ ಮಾತ್ರ ಇನ್ನೂ ಆ ಕೆಲಸ ಮಾಡುತ್ತಿದ್ದಾರೆ. ಅವರ ನಿರ್ಧಾರಕ್ಕೆ ನೂರಕ್ಕೆ ನೂರು ಬದ್ಧರಾಗಿರಬೇಕು ಎಂದು ಕೋರುತ್ತೇನೆ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಮೈತ್ರಿ ವಿಚಾರವಾಗಿ ದೇವೇಗೌಡರ ನಿರ್ಧಾರಕ್ಕೆ ಬದ್ಧ. ನನ್ನನ್ನು ಹೊರಗಡೆ ಮಾಧ್ಯಮದವರು ಅನೇಕ ಪ್ರಶ್ನೆ ಮಾಡಿದರು. ಕಾಂಗ್ರೆಸ್‌ನವರು ಏನೇನೋ ಹೇಳ್ತಾರೆ ಆದರೆ ಕಾಂಗ್ರೆಸ್ ಡಿಎಂಕೆ ಜೊತೆ ಹೋಗಲ್ವಾ? ನಿತೀಶ್ ಕುಮಾರ್ ಜೊತೆ ಹೋಗಿಲ್ವಾ? ನಮ್ಮ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನಾವು ಅದಕ್ಕೆ ಬದ್ಧ. ದೇವೇಗೌಡರು, ಕುಮಾರಸ್ವಾಮಿಯವರ ನೇತೃತ್ವದಲ್ಲಿ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button