ಕಾಂಗ್ರೆಸ್ ಕಚೇರಿಗೆ 50,000 ರೂ. ದಂಡ ಹಾಕಿದ ಬಿಬಿಎಂಪಿ!
ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಕೆ ಮಾಡಿದ್ದ ಹಿನ್ನೆಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಗೆ ಬರೋಬ್ಬರಿ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ನಗರದಲ್ಲಿ ಅನಧಿಕೃತ ಬ್ಯಾನರ್ ಅಳವಡಿಸಿದರೆ 50 ಸಾವಿರ ರೂ. ದಂಡ ಎಂಬ ನಿಯಮವನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. ಆ ನಿಯಮವನ್ನು ಕಟ್ಟು ನಿಟ್ಟಾಗಿ ಬಿಜೆಪಿ ಪಾಲಿಸುತ್ತಿದ್ದು, ಸದ್ಯ ನಗರದ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ (ಕ್ವೀನ್ಸ್ ರಸ್ತೆ) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಅಳವಡಿಸಿದ್ದ ಅನಧಿಕೃತ ಬ್ಯಾನರ್ ಅನ್ನು ತೆರವುಗೊಳಿಸಲಾಗಿದೆ. ಜತೆಗೆ 50,000 ರೂ. ದಂಡ ಕೂಡಾ ಹಾಕಲಾಗಿದೆ.
ರಾಜೀವ್ಗಾಂಧಿ ಹಾಗೂ ಅರಸು ಜನ್ಮ ದಿನಕ್ಕೆ ಬ್ಯಾನರ್ ಅಳವಡಿಕೆ
ಮಾಜಿ ಪ್ರಧಾನಿ ಆಧುನಿಕ ಭಾರತದ ಹರಿಕಾರ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ರವರ ಜನ್ಮ ದಿನಾಚರಣೆಯ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯ ವಸಂತನಗರ ವಾರ್ಡ್-93 ವ್ಯಾಪ್ತಿಯ ಕ್ಲೀನ್ಸ್ ರಸ್ತೆಯ ಸ್ವತ್ತಿನ ಸಂಖ್ಯೆ:12/1 ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಹಾಗೂ ರಾಜ್ಯದ ಎಲ್ಲಾ ಪಧಾಧಿಕಾರಿಗಳು ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದರು.
ಬಿಬಿಎಂಪಿಯಿಂದ ಅನುಮತಿಯನ್ನೇ ಪಡೆದಿಲ್ಲ!
ಬ್ಯಾನರ್ ಅಳವಡಿಸಿರುವ ಬಗ್ಗೆ ಪಾಲಿಕೆ ವತಿಯಿಂದ ಅಧಿಕೃತವಾಗಿ ಪರವಾನಿಗೆ/ಅನುಮತಿಯನ್ನು ಪಡೆದಿರುವುದಿಲ್ಲ. ಈ ಸಂಬಂಧ ಅಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರುರವರಿಗೆ 50,000 ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ದಂಡ ಮೊತ್ತ ಪಾವತಿಸಲು ಸೂಚನೆ
ಅನಧಿಕೃತ ಬ್ಯಾನರ್ ಅಳವಡಿಕೆ ಸಂಬಂಧಿಸಿದಂತೆ ದಂಡ ಮೊತ್ತವನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಖಾತೆಗೆ ಪಾವತಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದಾರೆ.
ನಂದು ಬೇಡ, ಸಿದ್ದರಾಮಯ್ಯ ಅವರನ್ನು ಬೇಡ ಎಂದಿದ್ದ ಡಿಕೆಶಿ
ಬ್ಯಾನರ್ ನಿಷೇಧ ಕಟ್ಟು ನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಹಿಂದೆ ಕಾರ್ಯಕರ್ತರಿಗೆ ಬ್ಯಾನರ್ ಹಾಕದಂತೆ ಸೂಚನೆ ನೀಡಿದ್ದರು. ಬ್ಯಾನರ್ ಯಾರದ್ದು ಹಾಕುವುದು ಬೇಡ. ಯಾರೇ ಆಗಿರಲಿ, ನಂದು ಬೇಡ, ಸಿಎಂ ಸಿದ್ದರಾಮಯ್ಯ ಅವರದ್ದು ಬೇಡ ಎಂದು ಹೇಳಿಕೆ ನೀಡಿದ್ದರು.