ಇತ್ತೀಚಿನ ಸುದ್ದಿಕ್ರೈಂ

ಉಡುಪಿ ವಾಶ್‌ರೂಂ ವಿಡಿಯೋ ಪ್ರಕರಣ; ಮೂವರು ವಿದ್ಯಾರ್ಥಿನಿಯರ ವಿರುದ್ಧ FIR, ಖುಷ್ಬೂ ಭೇಟಿ

ಉಡುಪಿ : ನಗರದ ಪ್ಯಾರಾಮೆಡಿಕಲ್​ ಕಾಲೇಜಿನ ವಾಶ್​ರೂಮ್​ನಲ್ಲಿ ವಿದ್ಯಾರ್ಥಿನಿಯರು ಇನ್ನೋರ್ವ ವಿದ್ಯಾರ್ಥಿನಿಯ ವಿಡಿಯೋ ಮಾಡಿದ ಗಂಭೀರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪೊಲೀಸರು ಪ್ರಕರಣ (FIR) ದಾಖಲಿಸಿಕೊಂಡಿದ್ದಾರೆ.

ಘಟನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆರೋಪಿತ ವಿದ್ಯಾರ್ಥಿನಿಯರನ್ನು ಬಂಧಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಮೂವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಉಡುಪಿಗೆ ಆಗಮಿಸಿದ ಖುಷ್ಬೂ ಸುಂದರ್ : ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಬುಧವಾರ ಉಡುಪಿಗೆ ಆಗಮಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರಿಸಲು ಇಲ್ಲಿಗೆ ಬಂದಿದ್ದೇನೆ. ಮೊದಲು ಪೊಲೀಸರನ್ನು ಭೇಟಿ ಮಾಡಿ ವಿವರಗಳನ್ನು ಪಡೆಯುತ್ತೇನೆ. ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿನಿಯರನ್ನೂ ಮಾತನಾಡಿಸುತ್ತೇನೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ” ಎಂದರು.

“ಮೊದಲು ನಾನು ಪ್ರಕರಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಎರಡು ದಿನ ಇಲ್ಲೇ ಇರುತ್ತೇನೆ. ಕಾಲೇಜಿಗೆ ಭೇಟಿ ನೀಡಿ ಸಂತ್ರಸ್ತರು ಹಾಗೂ ಕಾಲೇಜು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತೇನೆ” ಎಂದು ಖುಷ್ಬೂ ಹೇಳಿದರು.

ಎನ್‌ಸಿಡಬ್ಲ್ಯು ಮಾಜಿ ಸದಸ್ಯೆ ಶ್ಯಾಮಲಾ ಸುಂದರ್ ಮಾತನಾಡಿ, “ವಾಶ್‌ರೂಮ್‌ನಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಿಸಿರುವುದು ಗಂಭೀರ ವಿಷಯ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದ್ದು, ನಂತರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ” ಎಂದು ಹೇಳಿದ್ದರು.

ಗೃಹ ಸಚಿವರು ಹೇಳಿದ್ದೇನು?: ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್, “ಬಿಜೆಪಿಯವರು ಸಣ್ಣಸಣ್ಣ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಬೇರೇನೂ ಕೆಲಸವಿಲ್ಲ. ಇದೊಂದು ಸಣ್ಣ ಪ್ರಕರಣ” ಎಂದು ಹೇಳಿದ್ದಾರೆ.

ಬೊಮ್ಮಾಯಿ ಪ್ರಶ್ನೆ: ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, “ಸಣ್ಣ ವಿಷಯ ಎಂದಾದರೆ ಎಫ್‌ಐಆರ್ ಏಕೆ ದಾಖಲಿಸಲಾಗಿದೆ?. ವಿದ್ಯಾರ್ಥಿನಿಯರಿಂದ ಯಾಕೆ ‘ತಪ್ಪೊಪ್ಪಿಗೆ ಪತ್ರ’ ಪಡೆಯಲಾಗಿದೆ. ಆ ವಿದ್ಯಾರ್ಥಿಗಳನ್ನು ಏಕೆ ಅಮಾನತುಗೊಳಿಸಲಾಯಿತು ಎಂಬ ಪ್ರಶ್ನೆಗಳಿಗೆ ಗೃಹ ಸಚಿವರು ಉತ್ತರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಘಟನೆಯ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ 509, 204 ,175 ,34, 66(ಇ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎರಡು ಪ್ರತ್ಯೇಕ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧವೂ ಕೇಸು ದಾಖಲಾಗಿದೆ.

ಮಾರ್ಫಿಂಗ್​ ಮಾಡಿದ ವಿಡಿಯೊವೊಂದನ್ನು ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಮಹಿಳೆಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲೂ ಪೋಸ್ಟ್ ಮಾಡಿದ್ದಾರೆ. ಕೋಮು ದ್ವೇಷ ಹಾಗೂ ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಆರೋಪದ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಅಮಾನತು ಮಾಡಿತ್ತು. ಇನ್ನೊಂದೆಡೆ, ಆರೋಪಿತ ವಿದ್ಯಾರ್ಥಿನಿಯರನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

Related Articles

Leave a Reply

Your email address will not be published. Required fields are marked *

Back to top button