ಇತ್ತೀಚಿನ ಸುದ್ದಿ

ವಿಶ್ವ ದಾಖಲೆ ನಿರ್ಮಿಸಿದ ಕೋಟಿ ಕಂಠ ಗಾಯನ: ಕನ್ನಡ ಹಾಡಿಗೆ ದನಿಯಾದ ಸಿಎಂ

ಬೆಂಗಳೂರು: ಕರುನಾಡಿನ ಐತಿಹಾಸಿಕ ಕೋಟಿ ಕಂಠ ಗಾಯನ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು. ಈ ಕೋಟಿ ಕಂಠ ಗಾಯನ ವಿಶ್ವ ದಾಖಲೆ ನಿರ್ಮಿಸಿದೆ.

ಸಂಕಲ್ಪ ವಿಧಿ ಬೋಧನೆಯನ್ನು ಸಚಿವ ವಿ. ಸುನೀಲ್ ಕುಮಾರ್ ಬೋಧಿಸಿದರು. ವೇದಿಕೆ ಮೇಲಿದ್ದ ಗಣ್ಯರು ಹಾಗೂ ಮುಂದಿದ್ದವರು ಕೈ ಮುಂದೆ ಮಾಡಿ ನಾಡಿನ ಪ್ರೇಮದ ಸಂಕಲ್ಪ ಕೈಗೊಂಡರು. ಅರ್ಧಗಂಟೆ ಕಾರ್ಯಕ್ರಮ ನಡೆಯಿತು. ಕೋಟಿಕಂಠ ಗಾಯನ ವಿಶ್ವದಾಖಲೆ ಸೃಷ್ಟಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಯ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಲಾಯಿತು.

ನಾಡಿನ ಜನತೆಗೆ ಸಂದೇಶ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲರಿಗೂ ಕನ್ನಡದ ನಮಸ್ಕಾರ. ಕೋಟಿ ಕಂಟ ಗಾಯನಕ್ಕಾಗಿ ಶಾಲಾ ಮಕ್ಕಳು, ಕಲಾವಿದರು, ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರು ಸೇರಿ ಆರು ಗೀತೆ ಹಾಡಿ ಕನ್ನಡಕ್ಕೆಲ್ಲಾ ನಾವು ಒಂದು ಎಂಬ ಸಂದೇಶ ಸಾರಿದ್ದೀರಿ. ನಿಮಗೆ ನಮನ ಸಲ್ಲಿಸುತ್ತೇನೆ. ಭಾಗವಹಿಸಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ನಾಡಿನ ಜನಪ್ರಿಯ ಗಾಯಕರು, ಮಕ್ಕಳು ಕನ್ನಡ ಬಾವುಟ ಹಿಡಿದು, ಕೇಸರಿ ಕೆಂಪು ಉಡುಗೆ, ಬಾವುಟ ಹಿಡಿದು ಹಾಡಿ ರಂಜಿಸಿದರು. ಕಾರ್ಯಕ್ರಮ ನಡೆದ ವೇದಿಕೆ ಬಳಿಯಲ್ಲಿಯೂ ಗಾಯನಕ್ಕೆ ನೋಂದಣಿ ಕಾರ್ಯ ನಡೆದಿತ್ತು. ನೂರಾರು ಮಂದಿ ಆರು ಗೀತೆಗೆ ದನಿಯಾದರು. ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಹಾಡು ಮೊಳಗಿದ ಸಂದರ್ಭ ಮೈಕ್ ಹಿಡಿದ ಸಿಎಂ ಬಸವರಾಜ್ ಬೊಮ್ಮಾಯಿ ಸಹ ದನಿಗೂಡಿಸಿದರು. ಡಾ. ಹಂಸಲೇಕ ಅವರ ರಚನೆಯ ಗೀತೆಯನ್ನು ಡಾ. ರಾಜ್​ಕುಮಾರ್ ಹಾಡಿ ಜನಪ್ರಿಯಗೊಳಿಸಿದ್ದರು.

ಈ ಕಾರ್ಯಕ್ರಮಕ್ಕೆ ಕಲಾವಿದರು, ವಿದ್ಯಾರ್ಥಿಗಳು, ಕನ್ನಡ ಪ್ರೇಮಿಗಳು ಆಗಮಿಸಿದ್ದಾರೆ. ಸಮಾರಂಭದ ಯಶಸ್ಸಿಗೆ ಭಾಗವಹಿಸಿ ಬಲ ತುಂಬಿದ ಎಲ್ಲಾ ಗಣ್ಯರಿಗೆ ನಮನ ಸಲ್ಲಿಸುತ್ತೇನೆ. ಇದೊಂದು ಅಮೃತ ಗಳಿಗೆ. ರಾಜ್ಯೋತ್ಸವವನ್ನು ಆಯೋಜಿಸಿದ್ದೇವೆ. ಗಣ್ಯರಿಗೆ ಸನ್ಮಾನಿಸುತ್ತೇವೆ. ನಟ ಪುನಿತ್ ರಾಜ್​ಕುಮಾರ್​ಗೆ ಈ ಸಾರಿ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತೇವೆ. ವಿಧಾನಸೌಧ ಮುಂಭಾಗ ಕಾರ್ಯಕ್ರಮ ನಡೆಯಲಿದೆ. ಒಬ್ಬ ರತ್ನನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದ್ದು, ಜನ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಎಂದು ಬಯಸಿದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ”, ಹುಯಿಲಗೊಳ ನಾರಾಯಣರಾವ್ ವಿರಚಿತ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’, ಡಾ.ಚನ್ನವೀರ ಕಣವಿ ಅವರ ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವಾ’, ಡಾ.ಡಿ.ಎಸ್.ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಯಿತು.

ಇಂದಿನ ಕಾರ್ಯಕ್ರಮಗಳು ರಾಜ್ಯ, ಗಡಿನಾಡು, ಸಾಗರೋತ್ತರ ಹೊರತುಪಡಿಸಿ ರಾಜ್ಯದ ಹದಿನೈದು ಸ್ಥಳಗಳಲ್ಲಿ ವಿಶೇಷ ಕಾರ್ತಕ್ರಮ ಆಯೋಜಿಸಲಾಗಿತ್ತು. ವಿಧಾನಸೌಧದ ಮೆಟ್ಟಿಲು, ಗಾಂಧಿ ಪ್ರತಿಮೆ, ಹೈಕೋರ್ಟ್, ಕಂಠೀರವ ಕ್ರೀಡಾಂಗಣ, ವಿಮಾನ ನಿಲ್ದಾಣ, ರೈಲು, ಚಿತ್ರದುರ್ಗದ ಕೋಟೆ, ಕಡಲ ತೀರಗಳಲ್ಲಿ ಕನ್ನಡದ ಗೀತೆ ಮೊಳಗಿತು. ಇದಲ್ಲದೇ ಸಚಿವ ಡಾ. ಅಶ್ವತ್ಥನಾರಾಯಣ್ ತಮ್ಮ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಇದೇ ರೀತಿ ಆಸಕ್ತರು ವಿವಿಧೆಡೆ ವಿಶೇಷ ಕಾಳಜಿ ವಹಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಆರು ಕನ್ನಡ ಗೀತೆಗಳ ಗಾಯನದ ಆರಂಭ ಮೊದಲಿಗೆ ನಾಡಗೀತೆಯೊಂದಿಗೆ ಆಯಿತು. ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಗಾಯನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಕನ್ನಡ, ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಜಗ್ಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಮುಂತಾದವರು ವೇದಿಕೆ ಮೇಲಿದ್ದು ಸಾಕ್ಷಿಯಾದರು.

Related Articles

Leave a Reply

Your email address will not be published. Required fields are marked *

Back to top button