ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್ಸೆಟ್ಗಳಿಗೆ 24/7 ಉಚಿತ ವಿದ್ಯುತ್ : ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ತೆಲಂಗಾಣದ ಮಾದರಿಯಲ್ಲಿಯೇ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್ಸೆಟ್ಗಳಿಗೆ 24/7 ಗುಣಮಟ್ಟದ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂಶವನ್ನು ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗುವುದು ಎಂದರು. ಅಲ್ಲದೇ, ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಸಕ್ತಿ ಕೆ. ಚಂದ್ರಶೇಖರ್ ರಾವ್ ಅವರ ನೇತೃತ್ವದ ಬಿಆರ್ಎಸ್ ಪಕ್ಷಕ್ಕೆ ಇಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಗಳನ್ನೇ ಬೆಂಬಲಿಸುವ ನಿರ್ಧಾರಕ್ಕೆ ತೆಲಂಗಾಣ ಮುಖ್ಯಮಂತ್ರಿಗಳು ಬಂದಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. 2024ರ ಲೋಕಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಸಿಆರ್ ಚಿಂತನೆ ನಡೆಸಿದ್ದಾರೆ. ಅದರಂತೆ ರಾಜ್ಯದ ಗಡಿ ಭಾಗದಲ್ಲಿ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದಾರೆ ಎಂದು ಅವರು ಹೇಳಿದರು.
ನಮ್ಮ ಪಕ್ಷದ ಶಾಸಕರ ಜತೆ ಸೇರಿ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದ್ದೇನೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. 2006ರ 20 ತಿಂಗಳ ನಿಮ್ಮ ಆಡಳಿತ ನೋಡಿದ್ದೇನೆ. ಯಾವುದೇ ಕಪ್ಪುಚುಕ್ಕೆ ಇಲ್ಲದ ರೀತಿ ಆಡಳಿತ ನಡೆಸಿದ್ದೀರಿ. ಅದೇ ರೀತಿ ಮುಂದುವರೆಯಿರಿ ಎಂದು ಅವರು ನನಗೆ ಸಲಹೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ದಲಿತರ ಮೇಲಿನ ದೌರ್ಜನ್ಯ, ರೈತರ ನೆರವಿಗೆ ಧಾವಿಸುವ ಸಲುವಾಗಿ ನಾವು ಒಗ್ಗೂಡುತ್ತಿದ್ದೇವೆ. ಅದನ್ನೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮಾಡಿಕೊಂಡು ಮುಂದುವರಿಯುತ್ತಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈಗ ಟಿಆರ್ಎಸ್ ರಾಷ್ಟ್ರೀಯ ಪಕ್ಷವಾಗಿ ಬಿಆರ್ಎಸ್ ಹೆಸರಿನಲ್ಲಿ ಹೊರಹೊಮ್ಮಿರುವುದನ್ನು ನಮ್ಮ ಪಕ್ಷ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ಕೆ. ಚಂದ್ರಶೇಖರ್ ರಾವ್ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದರು ಕುಮಾರಸ್ವಾಮಿ.
ರಾಜ್ಯದಲ್ಲಿ ರೈತಬಂಧು ಯೋಜನೆ ಜಾರಿ: ತೆಲಂಗಾಣದಲ್ಲಿ ಜಾರಿ ಮಾಡಲಾಗಿರುವ ರೈತಬಂದು, ದಲಿತ ಬಂಧು ಯೋಜನೆಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರಲಾಗುವುದು ಎಂದು ಹೇಳಿದ ಕುಮಾರಸ್ವಾಮಿ ಅವರು, ಅಲ್ಲಿ ರೈತಬಂಧು ಯೋಜನೆಯಡಿ 24 ಗಂಟೆ ಉಚಿತ ವಿದ್ಯುತ್, ಪ್ರತಿ ವರ್ಷ ಎಕರೆಗೆ ಹತ್ತು ಸಾವಿರ ಸಹಾಯ ಧನ ಕೊಡುತ್ತಿದ್ದಾರೆ. ರೈತ ಅಕಾಲಿಕ ಮರಣಕ್ಕೀಡಾದರೆ ತಕ್ಷಣ 5 ಲಕ್ಷ ರೂಪಾಯಿ ವಿಮಾ ಪರಿಹಾರ ತಲುಪಿಸುತ್ತಿದ್ದಾರೆ. ರೈತರಿಗೆ ವಿಮೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮೂಲಕ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ದಲಿತರಿಗೆ ಕುಟುಂಬದಲ್ಲಿಯೇ ಸ್ವ ಉದ್ಯೋಗ ಮಾಡಲು ಹತ್ತು ಲಕ್ಷ ರೂಪಾಯಿ ನೆರವು ನೀಡುತ್ತಿದೆ ತೆಲಂಗಾಣ ಸರ್ಕಾರ. ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡುವ ದಲಿತಬಂಧು ಯೋಜನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಿಂದ ಕೆಲ ಸಂಘಟನೆ, ಪ್ರಗತಿ ಪರ ರೈತರು, ದಲಿತ ಸಂಘಟನೆ ಮುಖಂಡರನ್ನ ತೆಲಂಗಾಣಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿ. ಈ ಮೂಲಕ ನಿಮ್ಮ ಚುನಾವಣಾ ಪ್ರಚಾರಕ್ಕೆ ಈ ಅಂಶಗಳನ್ನು ಅಳವಡಿಸಿಕೊಳ್ಳಿ ಎಂದು ಕೆಸಿಆರ್ ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.
ಸಾಗುವಳಿ ಚೀಟಿ ಸಿಕ್ಕಿರುವುದು ರಾಜ್ಯಕ್ಕೆ ಮಾತ್ರ: ನಾನು ರಾಷ್ಟ್ರಮಟ್ಟದ ರಾಜಕೀಯಕ್ಕೆ ಹೋಗಲು ನಮ್ಮದು ಸಣ್ಣ ಪಕ್ಷ. ನಮಗೆ ಸಾಗುವಳಿ ಚೀಟಿ ಸಿಕ್ಕಿರುವುದು ಕರ್ನಾಟಕದ್ದು ಮಾತ್ರ. ಹೀಗಾಗಿ ನಾವು ಹೊರಗೆ ಬಕರ್ ಹುಕುಂ ಜಾಗ ಹುಡುಕುವುದಕ್ಕೆ ಆಗುತ್ತಾ ಎಂದ ಕುಮಾರಸ್ವಾಮಿ ಅವರು, ಕರ್ನಾಟಕ ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರುತ್ತದೆ ಎಂದರು.
ರಾಜ್ಯದಲ್ಲಿ 15-20 ಕ್ಷೇತ್ರಗಳ ಮೇಲೆ ಕೆಸಿಆರ್ ಪ್ರಭಾವ ಇರಬಹುದು. ಅವರ ಅನೇಕ ಶಾಸಕರುಗಳಿಗೆ ಆ ಭಾಗದಲ್ಲಿ ನೆಂಟಸ್ಥನ ಇದೆ. ಹೈದರಾಬಾದ್ ಕರ್ನಾಟಕದಲ್ಲಿ ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ ನಾವು 15-20 ಕ್ಷೇತ್ರ ಕಲ್ಯಾಣ ಕರ್ನಾಟಕದಲ್ಲಿ ಗೆಲ್ಲಬಹುದು. ಅಲ್ಲಿ ನಮ್ಮ ಪಕ್ಷದ ಸಂಘಟನೆ ಉತ್ತಮವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಜೋಡೋ: ಭಾರತ್ ಜೋಡೋ ಯಾಕೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸುಮ್ಮನೆ ಹೋಗ್ತಿದ್ದಾರೆ ಎಂದು ಜನ ಹೇಳ್ತಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆ ನೋಡಿದರೆ ಭಾರತ್ ಜೋಡೋಗಿಂತ ಕಾಂಗ್ರೆಸ್ ಜೋಡೋ ಮಾಡುವ ರೀತಿ ಇದೆ. ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದಾಗ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರ ಕೈ ಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸಿದ್ದಾರೆ.
ಎಲ್ಲರೂ ಒಗ್ಗಟ್ಟಾಗಿ ಹೋಗಿ ಅಂತ ಪದೇ ಪದೆ ಹೇಳ್ತಿದ್ದಾರೆ. ಈ ಪಾದಯಾತ್ರೆ ಮೇಲೆ ಚುನಾವಣೆ ನಡೆಯಲ್ಲ ಎಂದು ವ್ಯಂಗ್ಯವಾಡಿದರು. ಇನ್ನು ಜನಸ್ಪಂದನ ಎಂದು ಬಿಜೆಪಿ ಕಾರ್ಯಕ್ರಮ ಮಾಡಿದೆ. ತಾಕತ್ತು, ದಮ್ಮು, ತೊಡೆ ತಟ್ಟುವುದಕ್ಕೆ ಮಾತ್ರ ಆ ಕಾರ್ಯಕ್ರಮ ಸೀಮಿತವಾಗಿದೆ ಎಂದರು.
ಪಕ್ಷ ನೆಲ ಕಚ್ಚಿದ ಮೇಲೆ ಖರ್ಗೆಗೆ ಸ್ಥಾನ : ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಯಾರೂ ಇಲ್ಲದ ಸಂದರ್ಭದಲ್ಲಿ ಪಕ್ಷ ನೆಲಕಚ್ಚಿರುವ ವೇಳೆ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಕೂರಿಸಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
ಪಕ್ಷ ಸದೃಢವಾಗಿದ್ದಾಗಲೇ ಖರ್ಗೆ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಒಂದು ವರ್ಗದ ಮತಗಳು ಪರಿವರ್ತನೆ ಆಗುತ್ತವೆ ಅಂತ ಲೆಕ್ಕಾಚಾರದಲ್ಲಿದ್ಧಾರೆ. ಮುಂದೆ ಅವರಿಗೆ ಏನು ಪ್ರಾಮುಖ್ಯತೆ ಸಿಗುತ್ತದೆ ಅನ್ನೋದು ಮುಖ್ಯ ಅಲ್ಲವೇ? ಅವರು ಅಧ್ಯಕ್ಷರಾಗುವುದರಿಂದ ಏನು ಪ್ರಭಾವ ಬೀರುತ್ತದೆ ಎಂಬುದನ್ನು ಈಗಲೇ ಚರ್ಚೆ ಮಾಡೋದು ಬೇಡ. ಏನೆಂಬುದು ಇನ್ನು ಆರು ತಿಂಗಳು ಇದ್ದಾಗ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಅಭ್ಯರ್ಥಿಗಳ ಕಾರ್ಯಾಗಾರ: ಈ ತಿಂಗಳ 17 ಮತ್ತು 18 ರಂದು ಅಭ್ಯರ್ಥಿಗಳ ಕಾರ್ಯಗಾರ ಇಟ್ಟುಕೊಂಡಿದ್ದೇವೆ. ರಾಜ್ಯದ 130 ಕ್ಷೇತ್ರ ಗೆಲ್ಲಲು ಶ್ರಮ ವಹಿಸುತ್ತಿದ್ದೇವೆ. ಒಂದಿಷ್ಟು ಕ್ಷೇತ್ರಗಳಲ್ಲಿ ಎರಡು ಮೂರು ಜನ ಅಭ್ಯರ್ಥಿಗಳು ಇದ್ದಾರೆ. ಹೀಗಾಗಿ ಅವರೊಟ್ಟಿಗೂ ಹಾಗೂ ಕ್ಷೇತ್ರದ ಮುಖಂಡರ ಜೊತೆಗೂ ಚರ್ಚೆ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ದಾಸರಹಳ್ಳಿ ಮಂಜುನಾಥ್, ನಿಸರ್ಗ ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.