ರಾಜ್ಯ

ಹೊಳೆನರಸೀಪುರದಲ್ಲಿ ಬೆಂಕಿ ಬಿದ್ದರೆ ನಂದಿಸಲು ಅಗ್ನಿಶಾಮಕ ವಾಹನಗಳೇ ಇಲ್ಲ!

ಬೆಂಗಳೂರು: ಮಾಜಿ ಸಚಿವ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್‌ ಡಿ ರೇವಣ್ಣ ಆತಂಕದಲ್ಲಿದ್ದಾರೆ. ಕಾರಣ, ಅವರ ಕ್ಷೇತ್ರದಲ್ಲಿ ಬೆಂಕಿ ತಗುಲಿದರೆ ಅದನ್ನು ನಂದಿಸಲು ಅಗ್ನಿಶಾಮಕ ವಾಹನಗಳೇ ಇಲ್ಲ. ಹೌದು, ವಿಧಾನಸಭೆಯಲ್ಲಿ ಚುಕ್ಕೆಗುರುತ್ತಿಲ್ಲದ ಪ್ರಶ್ನೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡುವ ಮೂಲಕ ಶಾಸಕ ಎಚ್‌ಡಿ ರೇವಣ್ಣ ಗಮನ ಸೆಳೆದಿದ್ದಾರೆ.ಹೊಳೆನರಸೀಪುರ ಟೌನ್ ಅಗ್ನಿಶಾಮಕ ಠಾಣೆಯಲ್ಲಿ ಮೂರು ಅಗ್ನಿಶಾಮಕ ವಾಹನಗಳು ಇದ್ದವು. ಆದರೆ ವಾಹನಗಳ 15 ವರ್ಷಗಳ ಕಾಲಾವಧಿ ಮೀರಿದ ಕಾರಣದಿಂದಾಗಿ ಅವುಗಳನ್ನು ಇಲಾಖೆಗೆ ಹಿಂಪಡೆಯಲಾಗಿದೆ. ವಾಹನ ಸಂಖ್ಯೆ KA 01 G 8277 ಕಾಲಾವಧಿ 19-5-2023 ಮುಕ್ತಾಯಗೊಂಡರೆ , ವಾಹನ ಸಂಖ್ಯೆ, KA 01 G 8300 ಕಾಲಾವಧಿ 7-12-2023 ಕ್ಕೆ ಮುಕ್ತಾಯಗೊಂಡಿದೆ ಹಾಗೂ KA 42 G 408 18-12-2014 ಕ್ಕೆ 15 ವರ್ಷಗಳನ್ನು ಪೂರೈಸಿವೆ. ಹೀಗಾಗಿ ರಸ್ತೆ ಚಾಲನೆಯನ್ನು ಸ್ಥಗಿತಗೊಳಿಸಿವೆ.3 ವಾಹನಗಳನ್ನು ಇಲಾಖೆ ವಾಪಸ್ ಪಡೆದ ಹಿನ್ನೆಲೆಯಲ್ಲಿ ಹೊಳೆನರಸೀಪುರದಲ್ಲಿ ಯಾವುದೇ ಅಗ್ನಿಶಾಮಕ ವಾಹನ ಇಲ್ಲವಾಗಿದೆ. ಇದೀಗ ಬಿಸಿಲಿನ ದಗೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳಿಗೆ, ಹುಲ್ಲಿನ ಬವಣೆಗಳಿಗೆ ಬೆಂಕಿ ತಗುಲುತ್ತಿದೆ. ಆದರೆ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನಗಳು ಇಲ್ಲದೆ ಇರುವುದರಿಂದ ಜನರೂ ಆತಂಕಕ್ಕೆ ಒಳಗಾಗಿದ್ದಾರೆ.ಸಾರ್ವಜನಿಕ ಅನುಕೂಲಕ್ಕಾಗಿ 4,500 ಲೀಟರ್ ಸಾಮರ್ಥ್ಯದ 2 ಅಗ್ನಿಶಾಮಕ ವಾಹನಗಳನ್ನು ಕೂಡಲೇ ಒದಗಿಸಿಕೊಡುವಂತೆ ಎಚ್‌ಡಿ ರೇವಣ್ಣ ಗೃಹ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸದ್ಯ ಮುಂಜಾಗರೂಕತಾ ಕ್ರಮವಾಗಿ ಹಾಸನದ ಅಗ್ನಿಶಾಮಕ ಠಾಣೆಯಿಂದ ಒಂದು ವಾಹನವನ್ನು ಹೊಳೆನರಸೀಪುರ ಅಗ್ನಿಶಾಮಕ ಠಾಣೆಗೆ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿಯನ್ನು ಗೃಹ ಇಲಾಖೆ ನೀಡಿದೆ.ಕೆಲ ದಿನಗಳ ಹಿಂದೆ ಹೊಳೆನರಸೀಪುರದ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲೇವುಡ್ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಲಕ್ಷಾಂತರ ರು. ಮೌಲ್ಯದ ಮರ ಮತ್ತು ಪ್ಲೈವುಡ್ ನಾಶವಾಗಿತ್ತು. ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿತ್ತು.ಹೊಳೆ ನರಸೀಪುರದಲ್ಲಿ ವಾಹನಗಳ ಇಲ್ಲದೆ ಇರುವುದರಿಂದ ಬೆಂಕಿ ನಂದಿಸಲು ಹಾಸನ, ಚನ್ನರಾಯಪಟ್ಟಣದ ವಾಹನಗಳನ್ನು ಕರೆಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಕ್ಷೇತ್ರದ ಜನರ ಆತಂಕಕ್ಕೆ ಕಾರಣವಾಗಿದೆ.


Related Articles

Leave a Reply

Your email address will not be published. Required fields are marked *

Back to top button