ಇತ್ತೀಚಿನ ಸುದ್ದಿ

ಹರಿಹರದ ‌ಮನೆ ಮನೆಗೆ ತಲುಪಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ, ರಾಮ ವೇಷಧಾರಿ ಮಕ್ಕಳ ಪಾದ ಪೂಜೆ

ದಾವಣಗೆರೆ : ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ದೇಶಾದ್ಯಂತ ಪ್ರತಿ ಹಿಂದೂ ಮನೆಗಳಿಗೆ ವಿತರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ ದಾವಣಗೆರೆಯ ಹರಿಹರದಲ್ಲಿ ಮನೆ ಮನೆಗೆ ರಾಮ ವಿಶಿಷ್ಟ ಮಂತ್ರಾಕ್ಷತೆಯನ್ನು ಮುಟ್ಟಿಸುವ ಕಾರ್ಯ ನಡೆಯುತ್ತಿದೆ.

ಅಯೋಧ್ಯೆಯಲ್ಲಿ ಶ್ರೀರಾಮ‌ಮಂದಿರ ಉದ್ಘಾಟನೆ ಹಿನ್ನೆಲೆ ‌ರಾಮಮಂದಿರದ ಮಂತ್ರಾಕ್ಷತೆ ಮುಟ್ಟಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ದಾವಣಗೆರೆಯಲ್ಲಿ ಚಾಲನೆ ಸಿಕ್ಕಿದೆ. ದಾವಣಗೆರೆ ಜಿಲ್ಲೆಯ ಹರಿಹರ ನಗರದ ವಿಜಯನಗರದಲ್ಲಿ ರಾಮ ಲಕ್ಷ್ಮಣ ಸೀತಾ ವೇಷಧಾರಿ ಮಕ್ಕಳ ಪಾದ ಪೂಜೆ ಮಾಡಿ ಸಿಹಿ ವಿತರಣೆ ಮಾಡಲಾಗುತ್ತಿದೆ. ಹರಿಹರದ ಬಡಾವಣೆಯಲ್ಲಿ ಅಯೋಧ್ಯೆಯ ಸಂಭ್ರಮ ಮನೆ ಮಾಡಿದೆ. ಶ್ರೀರಾಮನ ವೇಷಧಾರಿ ಮಗುವಿನ ಪಾದಕ್ಕೆ ನಮಸ್ಕರಿಸಿ ಜನ ಭಕ್ತಿ ಮೆರೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ‌ ಮನೆ ಮನೆ ರಾಮ ವಿಶೇಷ ಕಾರ್ಯಕ್ರಮದ ಮೂಲಕ ಹರಿಹರ ಜನ ಗಮನ ಸೆಳೆದಿದ್ದಾರೆ.

ಕೊಪ್ಪಳದಲ್ಲೂ ಮಂತ್ರಾಕ್ಷತೆ ಮುಟ್ಟಿಸುವ ಕಾರ್ಯ

ಇನ್ನು ಕೊಪ್ಪಳ ನಗರದಲ್ಲಿ ಹಿಂದೂ ಕಾರ್ಯಕರ್ತರು ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೊಪ್ಪಳ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ನಗರದ ವಿವಿಧ ಬಡಾವಣೆಗಳಿಗೆ ಹೋಗಿ ಮಂತ್ರಾಕ್ಷತೆಯನ್ನು ನೀಡುವ ಕೆಲಸ ಮಾಡಿದ್ದಾರೆ. ಜಿಲ್ಲೆಯ ಬಹುತೇಕ ಮನೆಗಳಿಗೆ ಮಂತ್ರಾಕ್ಷತೆಯನ್ನು ತಲುಪಿಸಲು ಹಿಂದೂಪರ ಕಾರ್ಯಕರ್ತರು ಮುಂದಾಗಿದ್ದಾರೆ.

ವಿಶ್ವಹಿಂದೂ ಪರಿಷತ್‌ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಪರಿವಾರ ಸಂಘಟನೆಗಳು ಭಾರತದಲ್ಲಿರುವ ಸಮಸ್ತ ಹಿಂದೂ ಮನೆಗಳಿಗೆ ಕರಪತ್ರ, ಅಯೋಧ್ಯೆ ರಾಮಮಂದಿರದ ಭಾವಚಿತ್ರ ಹಾಗೂ ರಾಮನ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗಳಿಗೆ ಹಂಚುವ ಅಭಿಯಾನ ಕೈಗೊಂಡಿದ್ದಾರೆ.

ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ಯಾರೂ ಕೂಡ ಹಣವನ್ನು ನೀಡಿವಂತಿಲ್ಲ. ಯಾವುದೇ ಹಣವನ್ನು ಅಥವಾ ಯಾವುದೇ ವಸ್ತು ರೂಪದಲ್ಲಿ ನೀಡಬಾರದು. ಇದೊಂದು ಅಭಿಯಾನವಾಗಿರುವ ಕಾರಣ ಯಾವುದೇ ರೀತಿಯ ವ್ರತಾಚಾರಣೆ, ಕಟ್ಟು ಪಾಡು ನಿಯಮಗಳು ಇರುವುದಿಲ್ಲ ಎಂದು ಸೂಚಿಸಲಾಗಿದೆ.

ಅಯೋದ್ಯೆಯಲ್ಲಿ ರಾಮ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜೆ, ಹವನ ಸತ್ಸಂಗ, ಭಜನೆ ಮುಂತಾದ ಕಾರ್ಯಕ್ರಮ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button