
ಬೆಂಗಳೂರು: ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ (Suddaguntapalya) ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಹಿಂದಿನಿದ ಬಂದು ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದು ಸುಮಾರು 10 ದಿನಗಳ ಬಳಿಕ ಇದೀಗ ಆರೋಪಿ ಸಂತೋಷ್ ಡೆನಿಯಲ್ನನ್ನು ಕೇರಳ (Kerala) ಕೋಝಿಕ್ಕೋರ್ ಬಳಿಯ ಗ್ರಾಮದಿಂದ ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ಬೆಂಗಳೂರಿಗೆ (Bengaluru) ಕರೆತರಲಾಗುತ್ತಿದ್ದು, ಕೋರ್ಟ್ಗೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆರೋಪಿಯ ಚಲನವಲನ ಪತ್ತೆಗೆ 1,800ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆರೋಪಿ ಪತ್ತೆಗಾಗಿ ಡಿಸಿಪಿ ಸಾರಾ ಫಾತೀಮಾ 2 ತಂಡ ರಚಿಸಿದ್ದರು.
ಏಪ್ರಿಲ್ 3ರಂದು ಮುಂಜಾನೆ ಆರೋಪಿಯು ಯುವತಿ ಮೇಲೆರಗಿದ್ದ. ಸ್ನೇಹಿತೆ ಜತೆ ಯುವತಿ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದು ಕಿರುಕುಳ ನೀಡಿ ಪರಾರಿಯಾಗಿದ್ದ. ಸಂತ್ರಸ್ತೆಗೂ ಆರೋಪಿಗೂ ಯಾವುದೇ ಪರಿಚಯ ಇರಲಿಲ್ಲ. ಘಟನೆ ಬಳಿಕ ಬೆಂಗಳೂರು ನಗರ ತೊರೆದಿದ್ದ ಆರೋಪಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ದೂರು ನೀಡಿದ್ದರು.
ಕೇರಳದಲ್ಲಿ ಸಿಕ್ಕ ಆರೋಪಿ ತಿಲಕ ನಗರದ ಗುಲ್ವಾರ್ಗ ಕಾಲೋನಿ ನಿವಾಸಿಗಿರುವ ಸಂತೋಷ್ ಡೆನಿಯಲ್ ಎಂದು ಗುರುತಿಸಲಾಗಿದೆ. 26 ವರ್ಷ ವಯಸ್ಸಿನ ಆತ ಕಾರ್ ಶೋರೂಂನಲ್ಲಿ ಟೆಸ್ಟ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಸುಮಾರು 1800 ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು ಆತನ ಜಾಡು ಹಿಡಿದಿದ್ದರು. ಈ ವೇಳೆ, ಆತ ತಮಿಳುನಾಡು, ಕೇರಳದಲ್ಲಿ ತಪ್ಪಿಸಿಕೊಂಡು ಓಡಾಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.ಆರೋಪಿ ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಕೃತ್ಯದ ವೇಳೆ ಆತ ಬಳಸಿದ್ದ ಬೈಕ್ ನಂಬರ್ ಆಧರಿಸಿ ಗುರುತು ಪತ್ತೆಹೆಚ್ಚಲಾಗಿತ್ತು. ನಂತರ ಆತನ ಮನೆಯವರ ಬಳಿ ವಿಚಾರಿಸಿದಾಗ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಬಳಿಕ ಮೊಬೈಲ್ ಕೂಡ ಬಳಸದೆ ಆರೋಪಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾತ್ರವಲ್ಲದೆ, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯ ಜಾಡು ಹಿಡಿದಿದ್ದರು. ಕೊನೆಗೆ ಆತ ಕೇರಳದ ಸಂಬಂಧಿಕರ ಮನೆಯಲ್ಲಿ ಇರುವುದು ಗೊತ್ತಾಗಿದೆ. ಪೊಲೀಸರು ಭಾನುವಾರ ಕೊಝಿಕ್ಕೋಡ್ ಸಮೀಪದ ಹಳ್ಳಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಆತ ಹೊಸೂರು, ಸೇಲಂ ಮೂಲಕ ಕೇರಳ ತಲುಪಿ ತಲೆಮರೆಸಿಕೊಂಡಿದ್ದ. 10 ಜನ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.