ಸಂಸತ್ ಭದ್ರತಾ ಲೋಪ ಪ್ರಕರಣ, 6ನೇ ಆರೋಪಿಯನ್ನು ಬಂಧಿಸಿದ ಪೊಲೀಸ್
ನವದೆಹಲಿ: ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದ ಪ್ರಕರಣದ ಆರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಲಲಿತ್ ಝಾ ತಪ್ಪಿಸಿಕೊಳ್ಳು ನೆರವಾಗಿದ್ದ ಮಹೇಶ್ ಕುಮಾವತ್ ಎಂಬಾತನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಲ್ಲದೆ ಈತ ಕೂಡ ಸಂಪೂರ್ಣ ಷಡ್ಯಂತ್ರದ ಭಾಗವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಗಂಟೆಗಳ ವಿಚಾರಣೆ ಬಳಿಕ ಮಹೇಶ್‌ನನ್ನು ಬಂಧಿಸಲಾಗಿದೆ. ಆರೋಪಿ ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿಯಾಗಿದ್ದು, ಡಿಸೆಂಬರ್ 13 ರಂದು ಘಟನೆ ನಡೆದ ದಿನ ಈತ ಕೂಡ ದೆಹಲಿಗೆ ಬಂದಿದ್ದ ಎಂದು ತಿಳಿದುಬಂದಿದೆ.
ಸದನದಲ್ಲಿ ಗಲಭೆ ಎಬ್ಬಿಸಿದ್ದ ಇಬ್ಬರು
ಸಂಸತ್ತಿನ ಮೇಲಿನ 2001 ರ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಬುಧವಾರದಂದು ಪ್ರಮುಖ ಭದ್ರತಾ ಲೋಪ ಸಂಭವಿಸುತ್ತದೆ. ಕಲಾಪದ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು (ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ) ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದು ಹಳದಿ ಬಣ್ಣ ಸೂಸುವ ಬಾಂಬ್ ಸಿಡಿಸಿದ್ದರು. ಅದು ಹೊಗೆಯನ್ನು ಬಿಡುಗಡೆ ಮಾಡಿ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಘಟನೆ ನಡೆದ ತಕ್ಷಣ ಆ ಇಬ್ಬರೂ ಬಂಧಿಸಲಾಗಿತ್ತು.
ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು
ಅದೇ ಸಮಯದಲ್ಲಿ, ಸಂಸತ್ ಭವನದ ಹೊರಗೆ ಅದೇ ರೀತಿಯ ಕಲರ್ ಬಾಂಬ್ ಸಿಡಿಸಿದ್ದ ಅಮೋಲ್ ಶಿಂಧೆ ಮತ್ತು ನೀಲಮ್ ದೇವಿಯನ್ನ ಬಂಧಿಸಲಾಗಿತ್ತು.ಈ ನಾಲ್ವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಆರೋಪಗಳನ್ನು ದಾಖಲಿಸಿದ್ದಾರೆ.ಈ ಘಟನೆ ನಂತರ ರಾಜಸ್ಥಾನದ ಮಹೇಶ್, ದಾಳಿಯ ಪ್ರಮುಖ ಸಂಚುಕೋರ ಲಲಿತ್ ಝಾ ದೆಹಲಿಯಿಂದ ಪರಾರಿಯಾಗಿದ್ದರು. ಆರಂಭದಲ್ಲಿ ಬಂಧಿತರಾದ ನಾಲ್ವರು ಆರೋಪಿಗಳ ಮೊಬೈಲ್ ಫೋನ್ ಗಳನ್ನು ನಾಶಪಡಿಸುವಲ್ಲಿ ಮಹೇಶ್ ಕೂಡ ಲಲಿತ್ ಜೊತೆ ಸೇರಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಲಲಿತ್ ಗುರುವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದ, ಇದೀಗ ಆರನೇ ಆರೋಪಿ ಮಹೇಶ್ ಕೂಡ ಶರಣಾಗಿದ್ದಾರೆ. ಈತ ನೀಲಂ ದೇವಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.