ಶಾಸಕ ಮಾಡಾಳ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್)ಗೆ ರಾಸಾಯನಿಕಗಳನ್ನು ಪೂರೈಕೆ ಮಾಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಕೆ. ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠವು ಅಂತಿಮ ಆದೇಶ ಕಾಯ್ದಿರಿಸಿದೆ.
ಲೋಕಾಯುಕ್ತ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆಶೋಕ್ ಹಾರನಹಳ್ಳಿ, ಪ್ರಕರಣದಲ್ಲಿ ಮೊದಲ ಆರೋಪಿ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕಾಗಿದೆ. ಹೀಗಾಗಿ ಅರ್ಜಿದಾರರಿಗೆ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದು ಮಾಡಬೇಕು ಎಂದು ವಾದ ಮಂಡಿಸಿದ್ದರು.
ಅಲ್ಲದೆ, ಆರೋಪಿಗೆ ಈಗಾಗಲೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಅವರು ತನಿಖೆಗೆ ಹಾಜರಾಗುತ್ತಿದ್ದಾರೆ. ಆದರೆ, ಯಾವುದೇ ವಿಚಾರಗಳನ್ನು ತಿಳಿಸುತ್ತಿಲ್ಲ. ಏನೇ ಕೇಳಿದರೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ರದ್ದು ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಶಕ್ಕೆ ಪಡೆದು ತನಿಖೆ ನಡೆಸುವುದು ಎಂದರೆ ಸಿನಿಮಾದಲ್ಲಿ ತೋರಿಸುವಂತೆ ಹಿಂಸೆ ನೀಡಿ ಬಾಯಿ ಬಿಡಿಸುತ್ತಾರೆಯೇ ಎಂದು ಪ್ರಶ್ನಿಸಿತು. ಅಲ್ಲದೆ, ಪ್ರತಿ ದಿನ ತನಿಖೆಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ. ಇನ್ನೇನಾಗಬೇಕು ಎಂದು ಮರು ಪ್ರಶ್ನೆ ಮಾಡಿತು.
ವಾದ ಮುಂದುವರೆಸಿದ ಲೋಕಾಯುಕ್ತ ಪರ ವಕೀಲರು ಆರೋಪಿಯನ್ನು ವಶಕ್ಕೆ ಪಡೆಯದಿದ್ದರೆ ತನಿಖೆ ನಡೆಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಎರಡನೇ ಆರೋಪಿಯ ಮನೆಯ ಮೊದಲ ಆರೋಪಿ ಕೊಠಡಿಯಲ್ಲಿ 6 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಸಿಕ್ಕಿದೆ. ಈ ಎಲ್ಲ ಪ್ರಕ್ರಿಯೆಗೆ ಮೊದಲ ಆರೋಪ ಕಾರಣರಾಗಿದ್ದಾರೆ. ಹೀಗಾಗಿ ಜಾಮೀನು ರದ್ದುಪಡಿಸಬೇಕು ಎಂದು ಕೋರಿದರು.
ಮಾಡಾಳ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸುಮಂತ್, ಅರ್ಜಿದಾರ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಯಾವುದೇ ಆರೋಪ ಇಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲಂಚ ಕೇಳಿರುವುದು, ಸ್ವೀಕರಿಸಿರುವ ಸಂಬಂಧ ಸಾಕ್ಷ್ಯಾಧಾರಗಳಿಲ್ಲ. ದೂರು ನೀಡಿರುವವರ ಸಂಸ್ಥೆಗೆ ಟೆಂಡರ್ ಆಗಿದೆ. ರಾಸಾಯನಿಕಗಳ ಪೂರೈಕೆಗೆ ಅದೇ ಕಂಪನಿಗೆ ಆದೇಶವೂ ನೀಡಲಾಗಿದೆ. ಹೀಗಿರುವಾಗ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಬರುವುದಿಲ್ಲ ಎಂದು ಕೋರಿದರು.
ಅಲ್ಲದೇ, ಮೊದಲ ಆರೋಪಿಯ ಮಗ ಎರಡನೇ ಆರೋಪಿಯ ಖಾಸಗಿ ಕಚೇರಿಯಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಹಣ ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಮೊದಲ ಆರೋಪಿಯನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಕೋರಿದರು. ಇದಕ್ಕೆ ಪೀಠ, ತನಿಖೆಗೆ ಸಹಕಾರ ನೀಡದಿದ್ದಲ್ಲಿ ತನಿಖಾಧಿಕಾರಿಗಳು ಜಾಮೀನು ಮಂಜೂರು ಮಾಡಿರುವುದನ್ನು ರದ್ದು ಕೋರಿ ನ್ಯಾಯಾಲಯದ ಮೊರೆ ಹೋಗುವುದಕ್ಕೆ ಅವಕಾಶವಿದೆ ಎಂದು ತಿಳಿಸಿತು.
ಇದೇ ವೇಳೆ ಲೋಕಾಯುಕ್ತ ಪರ ವಕೀಲರು ವಾದಿಸುತ್ತ, ‘ಪ್ರಸ್ತುತ ದಿನಗಳಲ್ಲಿ ಲಂಚವನ್ನು ನೇರವಾಗಿ ಪಡೆಯುವುದಿಲ್ಲ. ಈ ಪ್ರಕರಣದಲ್ಲಿಯೂ ಸಹ ಪುತ್ರನ ಮೂಲಕ ಲಂಚ ಪಡೆದಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಸೂಚನೆ ಮೇರೆಗೇ ಪುತ್ರನನ್ನು ಭೇಟಿಯಾಗಿದ್ದರು. ಬಿಲ್ ಪಾವತಿಗೆ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. 81 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಸಂಭಾಷಣೆಯನ್ನು ದೂರುದಾರರು ರೆಕಾರ್ಡ್ ಮಾಡಿಕೊಂಡಿದ್ದಾರೆ’ ಎಂದು ಕೋರ್ಟ್ಗೆ ಹೇಳಿದರು.
ಆಗ, ಲಂಚಕ್ಕೆ ಕೆಎಸ್‌ಡಿಎಲ್ ಅಧ್ಯಕ್ಷರೇ ಬೇಡಿಕೆ ಇಟ್ಟಿದ್ದರೇ ? ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಸ್ವೀಕರಿಸಿರುವುದಕ್ಕೆ ಸಾಕ್ಷ್ಯವಿದೆಯೇ? ತಂದೆ ಮತ್ತು ಮಗ ಒಂದೇ ಮನೆಯಲ್ಲಿ ವಾಸವಾಗಿದ್ದರೇ? ಎಂದು ಹೈಕೋರ್ಟ್ ಎಂದು ಪ್ರಶ್ನೆ ಮಾಡಿತು. ಬಳಿಕ ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.