ವಾಣಿಜ್ಯ ಮಳಿಗೆಗಳಲ್ಲಿ ಶೇ.60 ಕನ್ನಡ ಬಳಸದವರಿಗೆ ಖಡಕ್ ಸೂಚನೆ: ತುಷಾರ್ ಗಿರಿ ನಾಥ್
ಬೆಂಗಳೂರು, ಜನವರಿ 04: ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು, ಅಂಗಡಿಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆ ಕಡ್ಡಾಯಗೊಳಿಸವ ಪ್ರಕ್ರಿಯೆಗಳು ಮುಂದುವೆರೆದಿವೆ.
ನಗರದ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಅಳವಡಿಸುವ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಪಾಲಿಕೆ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆಯನ್ನು ಬಳಸದೇ ಇರುವವರಿಗೆ ತಿಳುವಳಿಕೆ ಪತ್ರ ನೀಡಿ ಕೂಡಲೇ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರ ತುಷಾರ್ ಗಿರಿ ನಾಥ್ ಅವರು ವಲಯ ಆಯುಕ್ತರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಜನವರಿ 15ರ ಗಡುವು ನೀಡಿದ ಬಿಬಿಎಂಪಿ ಬೆಂಗಳೂರು ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲಾ ವಲಯದ ಉದ್ದಿಮೆಗಳನ್ನು ಜನವರಿ 15ರ ಒಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ತಿಳುವಳಿಕೆ ಪತ್ರ ನೀಡಬೇಕೆಂದು ಅವರು ಹೇಳಿದರು.
ಸಮೀಕ್ಷೆ ನಡೆಸುವಾಗ ನಾಮಪಲಕದಲ್ಲಿ ಕನ್ನಡ ಬಳಕೆ ಮಾಡದಿದ್ದಲ್ಲಿ ಆಯಾ ಉದ್ದಿಮೆಗಳಿಗೆ ತಿಳುವಳಿಕೆ ಪತ್ರ ನೀಡಬೇಕು. ಉದ್ದಿಮೆ ಪರವಾನಗಿ ಇದ್ದರೆ ಯಾಕೇ ನಾವು ಉದ್ದಿಮೆ ಪರವಾನಗಿ ರದ್ದು ಮಾಡಬಾರದು ಎಂದು ನೀಡಬೇಕು. ಒಂದು ವೇಳೆ ಉದ್ದಿಮೆ ಪರವಾನಗಿ ಮಾಡಿಸದ್ದಿದರೆ ಯಾಕೆ ನಾವು ನಿಮ್ಮ ಉದ್ದಿಮೆಯನ್ನು ಮುಚ್ಚಬಾರದೆಂದು ತಿಳುವಳಿಕೆ ಪತ್ರವನ್ನು ಜಾರಿಮಾಡಬೇಕೆಂದು ತಿಳಿಸಿದರು.