ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನೌಕರರ ಅರಿಯರ್ಸ್ ಹಣವನ್ನು ಅಕ್ರಮವಾಗಿ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಡಳಿತ ಮಂಡಳಿಯೇ ಈ ಅಕ್ರಮದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಲಾಗಿದೆ. ಕಾಂಗ್ರೆಸ್ನ ಮಾಜಿ ಮುಖಂಡ ಡಾ.ಹೆಚ್.ಎನ್.ರವೀಂದ್ರರಿಂದ ಗಂಭೀರ ಆರೋಪ ಮಾಡಲಾಗಿದೆ. ಲೋಕಾಯುಕ್ತ ತನಿಖೆಗೆ ಒತ್ತಾಯಿಸಲಾಗಿದೆ.
ಅದು ಸಕ್ಕರೆನಾಡಿನ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC Bank). ಸ್ಥಳೀಯ ರೈತರು, ಸಂಘ ಸಂಸ್ಥೆಗಳಿಗೆ ಅನುಕೂಲಕರವಾಗುತ್ತಿದ್ದ ಬ್ಯಾಂಕ್ ಮೇಲೆ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಬ್ಯಾಂಕ್ನ ನೌಕರರನ್ನ ಆಡಳಿತ ಮಂಡಳಿಯವರೇ ಸುಲಿಗೆ ಮಾಡಿತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯ ನಾಯಕರೊಬ್ಬರು, ಕೆಲವೊಂದು ದಾಖಲೆಗಳನ್ನ ಬಿಡುಗಡೆ ಮಾಡಿ ಲೋಕಾಯುಕ್ತ ತನಿಖೆಗೆ ಒತ್ತಾಯಿಸುತ್ತಿದ್ದಾರೆ.ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಬ್ಯಾಂಕಿನ ಆಡಳಿತ ಮಂಡಳಿಯವರೇ ಬ್ಯಾಂಕಿನ ನೌಕರರ ಖಾತೆಗೆ ಕನ್ನ ಹಾಕಿದ್ದಾರಂತೆ. ಬ್ಯಾಂಕಿನ ಎಲ್ಲಾ ನೌಕರರಿಗೂ 2017ರ ಸಾಲಿನಲ್ಲಿ ಅರಿಯರ್ಸ್ ಬಿಡುಗಡೆಯಾಗಿತ್ತು. ಆ ಅರಿಯರ್ಸ್ ಹಣದ ಮೇಲೆ ವಕ್ರದೃಷ್ಟಿ ಬಿಟ್ಟ ಆಡಳಿತ ಮಂಡಳಿ ಪ್ರತಿ ನೌಕರರ 9 ತಿಂಗಳ ಹಣವನ್ನ ಲಂಚವಾಗಿ ವಸೂಲಿ ಮಾಡಿದ್ದಾರಂತೆ. ಬ್ಯಾಂಕ್ನ ಸುಮಾರು 400 ನೌಕರರ ತಲಾ 78,264 ರೂ.ನಲ್ಲಿ 53,784 ರೂಪಾಯಿಯನ್ನ ಲಂಚವಾಗಿ ಪಡೆದಿದ್ದಾರಂತೆ. ಅದೂ, ಪ್ರತಿ ನೌಕರನ ಖಾತೆಗೆ ಡೆಪಾಸಿಟ್ ಆದ ದಿನವೇ ಸೆಲ್ಫ್ ಡ್ರಾ ಮೂಲಕ ಹಣ ಸಂಗ್ರಹಿಸಲಾಗಿದೆ.ಇನ್ನು ಆಡಳಿತ ಮಂಡಳಿಯವರ ನಡೆಗೆ ಆರಂಭದಲ್ಲಿ ಹಲವು ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗೆ, ವಿರೋಧ ವ್ಯಕ್ತಪಡಿಸುವ ನೌಕರರನ್ನ ದೂರಕ್ಕೆ ವರ್ಗಾವಣೆ ಮಾಡುವುದಾಗಿ ಅಥವಾ ಇಲ್ಲಸಲ್ಲದ ಆರೋಪ ಮಾಡಿ ಅಮಾನತ್ತು ಮಾಡುವ ಶಿಕ್ಷೆ ನೀಡ್ತಾರಂತೆ. ಇದ್ಯಾವುದಕ್ಕೂ ಬಗ್ಗದ ಇಬ್ಬರು ನೌಕರರನ್ನ ಆಡಳಿತ ಮಂಡಳಿ ಅಮಾನತ್ತು ಮಾಡಿದೆಯಂತೆ. ಈ ಎಲ್ಲಾ ಬೆದರಿಕೆಯಿಂದ ಮನನೊಂದ ನೌಕರರು ವಿಧಿ ಇಲ್ಲದೆ ಆಡಳಿತ ಮಂಡಳಿಯವರಿಗೆ ಲಂಚ ಕೊಟ್ಟು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.ನೌಕರರಿಂದ ಹಣ ವಸೂಲಿಗೆ ಅಂತ ತಾಲೂಕಿಗೆ ಇಬ್ಬರನ್ನ ನೇಮಿಸಲಾಗಿತ್ತು. ಆ ಏಳು ತಾಲೂಕುಗಳಿಂದ ವಸೂಲಿ ಮಾಡಿದ ಹಣವನ್ನ ಕೆ.ಶಂಕರ್ ಎಂಬಾತ ಸಂಗ್ರಹಿಸಿದ್ದ. ಕೆ.ಶಂಕರ್ ಎಂಬಾತ 2024ರ ಮೇ 16ರಂದು ಅಮರಾವತಿ ಹೋಟೆಲ್ನಲ್ಲಿ ಆಡಳಿತ ಮಂಡಳಿಯವರಿಗೆ ಹಸ್ತಾಂತರ ಮಾಡಿದ್ದಾನೆ. ಇದರ ಹಿಂದೆ ಜಿಲ್ಲಾ ಮಂತ್ರಿ ಚಲುವರಾಯಸ್ವಾಮಿ ಅವರ ಪಾತ್ರ ಇರುವ ಶಂಕೆ ಇದೆ. ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳು ನನ್ನ ಬಳಿ ಇವೆ. ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ಕೊಡ್ತೀನಿ. ಸೂಕ್ತ ತನಿಖೆ ಮಾಡಿ ಇದರಲ್ಲಿ ಯಾರು ಯಾರು ಪಾತ್ರದಾರಿಗಳು ಎಂಬುದು ಬಹಿರಂಗ ಆಗಬೇಕು ಅಂತಾ ರಾಷ್ಟ್ರೀಯ ವೈದ್ಯಕೀಯ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಹೆಚ್.ಎನ್.ರವೀಂದ್ರ ಆಗ್ರಹಿಸಿದ್ದಾರೆ.ಒಂದೆಡೆ, ಡಾ.ರವೀಂದ್ರ ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದರೆ, ಮತ್ತೊಂದೆಡೆ, ನೌಕರರ ಸಂಘದ ಕೆಲವರು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರನ್ನ ಭೇಟಿ ಮಾಡುವ ಜೊತೆಗೆ ರಾಜ್ಯ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದು ತಮ್ಮ ನೋವು ತೋಡಿಕೊಂಡಿದ್ದಾರೆ. ಇದೆಲ್ಲದರ ನಡುವೆ, ಡಾ.ರವೀಂದ್ರ ಅವರ ಆರೋಪ ಮತ್ತು ಕೆಲ ನೌಕರರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾದ ವಿಚಾರಕ್ಕೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಹೇಳೋದೇ ಬೇರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ರವೀಂದ್ರ ಒಬ್ಬ ಫ್ರಾಡ್. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ದಾಖಲೆಗಳಿದ್ದರೆ ಲೋಕಾಯುಕ್ತಕ್ಕಲ್ಲ, ಯಾವುದೇ ತನಿಖೆಗೂ ಸಿದ್ಧ. ಅವರು ಮಾಡಿರುವ ಆರೋಪ ಸಾಬೀತು ಮಾಡಿದರೆ ರಾಜೀನಾಮೆ ಕೊಡುವುದುಕ್ಕೂ ರೆಡಿ ಇದ್ದೀವಿ ಅಂತಾ ತಿರುಗೇಟು ನೀಡಿದ್ದಾರೆ.ಇತ್ತ ಮಂಡ್ಯ ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪ ಒಂದೆಡೆಯಾದರೆ, ಅತ್ತ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಆರೋಪವನ್ನ ಅಲ್ಲಗೆಳೆಯುತ್ತಿದ್ದಾರೆ. ಆರೋಪ ಮಾಡಿರುವರು ದೂರು ಕೊಡುತ್ತಾರಾ? ದೂರು ಆಧರಿಸಿ ತನಿಖೆ ನಡೆಯುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.