ಇತ್ತೀಚಿನ ಸುದ್ದಿದೇಶರಾಜ್ಯ

ರಾಜ್ಯದಲ್ಲಿ ಇಂದು ರಜೆ ನೀಡದಿರುವುದನ್ನ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಗಳ್ಳಿ ಹೋಬಳಿಯಲ್ಲಿರುವ ಹಿರಂಡಹಳ್ಳಿ ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಇಂದು ಮಂದಿರವನ್ನು ಉದ್ಘಾಟಿಸಿದ್ರು. ಶ್ರೀ ರಾಮ ಟೆಂಪಲ್ ಟ್ರಸ್ಟ್ ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಸೀತಾ-ರಾಮ, ಲಕ್ಷ್ಮಣ ಹಾಗೂ 33 ಅಡಿ ಆಂಜನೇಯ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉಪಸ್ಥಿತಿಯಲ್ಲಿ ಕಳೆದ 3 ದಿನಗಳಿಂದ ಪೂಜೆ ಪುನಸ್ಕಾರಗಳನ್ನ ನಡೆಸಲಾಗಿದೆ.

ರಾಮ ಮಂದಿರ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಶ್ರೀರಾಮನ ಪ್ರತಿಷ್ಠಾಪನೆ ಆಗುತ್ತಿರುವಾಗ ಕರ್ನಾಟಕದಲ್ಲಿ ತಾವು ಸರ್ಕಾರಿ ರಜೆ ನೀಡದಿರುವುದನ್ನ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ರಜೆ ನೀಡಿದ್ಯಾ? ಕಾರ್ಯಕ್ರಮ ನಡೆಯುತ್ತಿರುವುದು ಅಯೋಧ್ಯೆಯಲ್ಲಿ. ಆದರೆ ಕೇರಳ, ದೆಹಲಿ (ಜನವರಿ 22 ರಂದು ದೆಹಲಿ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ), ಪಶ್ಚಿಮ ಬಂಗಾಳದಲ್ಲಿ ರಜೆ ಇದ್ಯಾ? ಎಂದು ರಜೆ ನೀಡದ ವಿಚಾರಕ್ಕೆ ಬಿಜೆಪಿ‌ ಆಕ್ಷೇಪ ವಿಚಾರಕ್ಕೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಖಾರವಾಗಿ ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ ಅವರು ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಇಲ್ಲಿರುವ ರಾಮನಲ್ಲಿಯೇ ನಮ್ಮೂರಿನ ರಾಮ, ಅಯೋಧ್ಯೆಯ ರಾಮನನ್ನು ಕಾಣಬಹುದು. ಎಲ್ಲರೂ ಒಂದೇ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು ಗಾಂಧೀಜಿ ಕೂಡ ರಾಮನ ಭಕ್ತ ಎಂದರು. ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಿಸಿರುವ ಶ್ರೀರಾಮ ಟ್ರಸ್ಟ್ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನ ಮಾಡಲಾಯಿತು. ಶ್ರೀರಾಮ ಟ್ರಸ್ಟ್ ವತಿಯಿಂದ ಸಿಎಂ ಸಿದ್ದರಾಮಯ್ಯಗೆ ರಾಮ, ಲಕ್ಷ್ಮಣ, ಸೀತೆ ವಿಗ್ರಹ ಹಾಗೂ ಬಿಲ್ಲು ಬಾಣ ನೀಡಲಾಯಿತು.

ನಾನು‌ ನಾಸ್ತಿಕನಲ್ಲ, ಯಾವತ್ತೂ ದೇವರ ಅಸ್ತಿತ್ವವನ್ನು ನಾನು ವಿರೋಧ ಮಾಡಿಲ್ಲ- ಸಿದ್ದರಾಮಯ್ಯ

ದೇಗುಲ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಶ್ರೀರಾಮ ಚಂದ್ರ, ಸೀತಾದೇವಿ, ಲಕ್ಷ್ಮಣ, ಆಂಜನೇಯ ಇವರು ಮೂರ್ತಿಗಳುಳ್ಳ ಮೂರ್ತಿ ಪ್ರತಿಷ್ಠಾನೆಯಲ್ಲಿ ಸಂತೋಷದಿಂದ ಭಾಗವಹಿಸಿದ್ದೀವಿ. ನಾನು‌ ನಾಸ್ತಿಕನಲ್ಲ, ನಾನು ಕೂಡ ಆಸ್ತಿಕನೇ. ಶ್ರೀರಾಮಚಂದ್ರನ್ನ ಇಡೀ‌ ದೇಶ ಪ್ರೀತಿಸುತ್ತಾರೆ. 143 ಕೋಟಿ ಜನ‌ ಪೂಜಿಸುತ್ತಾರೆ. ರಾಜ್ಯದ ಹಳ್ಳಿಹಳ್ಳಿಗಳಲ್ಲಿ‌ ರಾಮನ ದೇವಸ್ಥಾನ ಇದೆ. ನಮ್ಮೂರಿನಲ್ಲಿ ನಾನೂ ಶ್ರೀರಾಮ ದೇವಸ್ಥಾನ ಕಟ್ಟಿಸಿದ್ದೀನಿ. ನಾವು ರಾಮ, ಆಂಜನೇಯನ ಪರಮ ಭಕ್ತರು. ಯಾವತ್ತೂ ಕೂಡ ನಾನು ದೇವರ ಅಸ್ತಿತ್ವವನ್ನು ವಿರೋಧ ಮಾಡಿಲ್ಲ ಎಂದರು.

ದೇವನೊಬ್ಬ, ನಾಮ ಹಲವು ಅಂತ ಹೇಳ್ತಾರೆ. ಕೆಲವರು ಈಶ್ವರ, ಆಂಜನೇಯ, ಕೃಷ್ಣಾ, ಚಾಂಮುಂಡಿ, ತಿಮ್ಮಪ್ಪ ರಾಮನನ್ನ ಪೂಜಿಸುತ್ತಾರೆ. ಹೀಗೆ ಬೇರೆಬೇರೆ ಹೆಸರುಗಳನ್ನ ದೇವರನ್ನ ಕರೆದು ಪೂಜಿಸುತ್ತಿರುವುದು ಅನಾದಿ ಕಾಲದಿಂದಲೂ ಬಂದಿದೆ. ಹೊಸದಾಗಿ ಶ್ರೀರಾಮ ಟೆಂಪಲ್ ಕಟ್ತಿಲ್ಲ. ಹಿಂದೆಯೂ ಕಟ್ಟಿದ್ದಿವಿ, ಈಗಲೂ ಕಟ್ಟಿದ್ದೀವಿ, ಮುಂದೆಯೂ ಕಟ್ಟುತ್ತಲೇ ಇರುತ್ತೇವೆ. ಬದುಕಿರುವವರೆಗೂ ಕಟ್ಟುತ್ತಿರುತ್ತೇವೆ. ರಾಮಾಯಣ ಆದರ್ಶ ಕೊಟ್ಟಿದೆ. ಮರ್ಯಾದಾ ಪುರುಷ, ಆದರ್ಶ ಪುರುಷ ಅಂತ ರಾಮನನ್ನ ಕರೆಯುತ್ತೇವೆ. ರಾಮರಾಜ್ಯ ಆಗ್ಬೇಕು ಅಂತ ಗಾಂಧೀಜಿಯವರು ಸಹ ಆಶಿಸಿದ್ದರು. ರಾಮರಾಜ್ಯ ಅಂದ್ರೆ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗ್ಬೇಕು. ದೇಶದ ಇಡೀ ದೈವ ಎಲ್ಲರಿಗೂ ಸೇರಿದ್ದು. ಎಲ್ಲ ಧರ್ಮಗಳು ಮನುಷ್ಯನ ಒಳಿತನ್ನ ಬಯಸುತ್ತದೆ. ಸಹಿಷ್ಣತೆ, ಸಹಬಾಳ್ವೆ ಅಂತ ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆದುಕೊಂಡಿದ್ದೇವೆ. ಎಲ್ಲರೂ ಮನುಷ್ಯರಾಗಿ ಬಾಳಬೇಕು. ಪ್ರೀತಿ, ವಿಶ್ವಾಸದಿಂದ ಬದುಕಬೇಕು, ಯಾರನ್ನೂ ದ್ವೇಷಿಸಬಾರದು. ಇದೇ ಅಂಶಗಳನ್ನ‌ ರಾಮಾಯಣ ಮತ್ತು ಮಹಾಭಾರತದಲ್ಲಿ ಹೇಳಿರೋದು ಎಂದು ಸಿ ಎಂ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.

Related Articles

Leave a Reply

Your email address will not be published. Required fields are marked *

Back to top button