ಮೈಸೂರು: ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯ
ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗರ್ಭಿಣಿಯಾಗಿರುವ ಮಹಿಳೆಯರಿಗೆಸೀಮಂತ ಕಾರ್ಯ ನಡೆಸಲಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಹಿಂದೆ ಪೊಲೀಸ್ ಠಾಣೆಗಳಲ್ಲಿ ಸೀಮಂತ ಕಾರ್ಯ ನಡೆಸಿದ ಉದಾಹರಣೆಗಳನ್ನು ಕಾಣಬಹುದು. ಇದೀಗ, ತುಳಸಿ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಗರ್ಭಿಣಿಯರಿಗೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
ತುಳಸಿ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಇಂದು ಮೈಸೂರು ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಮಂತ ಕಾರ್ಯಕ್ರಮ ಆಯೋಜಿಸಿ ಗರ್ಭಿಣಿಯರಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ನಡೆಸಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ವೈದ್ಯಾಧಿಕಾರಿಗಳು ಅರಿಶಿನ, ಬಳೆ ವಿತರಣೆ ಮಾಡಿ ಆರತಿ ಬೆಳಗಿದರು.
ಬಳಿಕ ಗರ್ಭಿಣಿಯರಿಗೆ ಪ್ರಸವ ಪೂರ್ವ ಆರೈಕೆ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ವಿಶೇಷ ಜಾಗೃತಿ ಮೂಡಿದರು. ಸೀಮಂತ ಕಾರ್ಯಕ್ರಮದಲ್ಲಿ ಡಿಹೆಚ್ಒ ಡಾ.ಪಿಸಿ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾದರು.
ಇತ್ತೀಚೆಗಷ್ಟೇ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ ಹಾಗೂ ಉಪವಿಭಾಗ ಆಸ್ಪತ್ರೆ ಸಹಯೋಗದಲ್ಲಿ ಸಾಮೂಹಿಕ ಸೀಮಂತ ಕಾರ್ಯ ನಡೆಸಲಾಗಿತ್ತು. ಒಟ್ಟು 250 ಗರ್ಭಿಣಿಯರಿಗೆ ಸೀಮಂತ ಮಾಡಲಾಗಿತ್ತು.