ಇತ್ತೀಚಿನ ಸುದ್ದಿ

ಮುದ್ದೇಬಿಹಾಳ: ಮತದಾನ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ

ಮುದ್ದೇಬಿಹಾಳ: ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಮತದಾನ ಬಹುಮುಖ್ಯ ಪಾತ್ರ ವಹಿಸಿದ್ದು, ಮತದಾನದಿಂದ ಯಾರು ವಂಚಿತರಾಗದೆ ಮೇ-೦೭ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್.ಎಸ್.ಕಲ್ಮನಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರ ನಡೆದ “ಮತದಾನ ಜಾಗೃತಿ ತಾಲೂಕುಮಟ್ಟದ ಕಾಲ್ನಡಿಗೆ ಜಾಥಾ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್ ಸಮಿತಿಯಿಂದ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ನಗರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನ ಕುರಿತು ಅರಿವು ಮೂಡಿಸುವುದರ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಯಬೇಕು ಎಂದು ಹೇಳಿದರು.

ಪ್ರತಿಯೊಬ್ಬ ಪ್ರಜೆಗೂ ತನ್ನ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಾಗಿದೆ. ಪ್ರಜೆಗಳ ಆಯ್ಕೆಯಿಂದ ಸದೃಢ ಸರ್ಕಾರಗಳ ರಚನೆಯಾಗುತ್ತದೆ. ಆಸೆ, ಆಮಿಷಗಳಿಗೆ ಒಳಗಾಗದೆ ನಿಮ್ಮ ಹಕ್ಕು ಚಲಾಯಿಸಿ ಎಂದು ಸಲಹೆ ನೀಡಿದರು.
ತಹಶೀಲ್ದಾರ ಬಸವರಾಜ ನಾಗರಾಳ ಅವರು, ತಾಲೂಕು ಪಂಚಾಯತಿ ಆವರಣದಲ್ಲಿ ಕಾಲ್ನಡಿಗೆ ಜಾಥಾಕ್ಕೆ ಹಸಿರುನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಜಾಥಾವು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಆರ್.ಅಂಬೇಡ್ಕರ್ ವೃತ್ತ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿಟಿ ಮಾರ್ಕೆಟ್, ಬಸವೇಶ್ವರ ವೃತ್ತದಲ್ಲಿ ಜಾಗೃತಿ ಮೂಡಿಸಲಾಯಿತು. ನಂತರ ನಗರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮತದಾನ ಅರಿವು ಮೂಡಿಸಿ ಮುಕ್ತಾಯಗೊಳಿಸಲಾಯಿತು.

ಜಾಥಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಮತದಾನ ಜಾಗೃತಿ ಟ್ಯಾಬ್ಲೋ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆಯಿತು. ಎಲ್ಲ ಗ್ರಾಮ ಪಂಚಾಯತಿಯ ಸ್ವಚ್ಛ ವಾಹಿನಿಗಳು ಅಲಂಕೃತಗೊಂಡು ಜಿಂಗಲ್ಸ್ ಗಳನ್ನು ಆಳವಡಿಸಿ ಬೀದಿಗಳಲ್ಲಿ ಸಂಚರಿಸಿದವು.

ಪುರಸಭೆ ಮುಖ್ಯಾಧಿಕಾರಿ ಬಿ.ಎಸ್.ಬಳಗನೂರ, ತಾ.ಪಂ. ಸಹಾಯಕ ನಿರ್ದೇಶಕರಾದ ಪಿ.ಎಸ್.ಕಸನಕ್ಕಿ, ಕೆ.ಎಸ್.ಜಾಧವ, ತಾಲೂಕು ಆರೋಗ್ಯ ಅಧಿಕಾರಿ ಸತೀಶ ತಿವಾರಿ, ಸಾಮಾಜಿಕ ಅರಣ್ಯ ಇಲಾಖೆ ಉಪ ವಲಯಾರಣ್ಯಧಿಕಾರಿ ಎಸ್.ಜಿ.ಸಂಗಾಲಕ, ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button