ಮುಂಜಾನೆ ವಾರ್ತೆ ವರದಿಗೆ ಎಚ್ಚೆತ್ತ ಅಧಿಕಾರಿಗಳು

ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಪಂಚಾಯಿತಿ
ಪಾವಗಡ: ತಾಲ್ಲೂಕಿನ ಪೊನ್ನಸಮುದ್ರ ಗ್ರಾಮದ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿ ಗ್ರಾಮಸ್ಥರಲ್ಲಿ ನಾನಾ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿಕೊಂಡಿತ್ತು.
ಚರಂಡಿಯಲ್ಲಿ ತ್ಯಾಜ್ಯ ಶೇಖರಣೆಯಾಗಿ ನೀರು ಹರಿಯದೆ ಸೊಳ್ಳೆಗಳ ಕಾಟ ಹೆಚ್ಚಾಗಿತ್ತು.
ಈ ಕುರಿತು ಮುಂಜಾನೆ ವಾರ್ತೆ ಪತ್ರಿಕೆ ಸ್ವಚ್ಛತೆ ಮರೀಚಿಕೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನತೆ: ಮೌನಕ್ಕೆ ಜಾರಿದ ಗ್ರಾ.ಪಂ.ಅಧಿಕಾರಿಗಳು..! ಎಂಬ ಶೀರ್ಷಿಕೆಯಡಿಯಲ್ಲಿ ಶನಿವಾರ ಸುದ್ದಿ ಪ್ರಕಟಿಸಿತ್ತು.
ವರದಿಗೆ ಎಚ್ಚೆತ್ತ ಪೊನ್ನಸಮುದ್ರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಂಗಳವಾರ ಚರಂಡಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ.
ಚರಂಡಿ ಸ್ವಚ್ಛಗೊಳಿಸುವ ಕ್ರಮ ಕೈಗೊಂಡು, ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಸಾತಿಹಾಳ್ ಮತ್ತು ಅಧ್ಯಕ್ಷ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಾರೆ ಗ್ರಾಮದ ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಂಡಿರುವುದಕ್ಕೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.