
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ (Riyan Parag) ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವಾಗ್ವಾದಕ್ಕೆ ಕಾರಣ ಮೂರನೇ ಅಂಪೈರ್ ನೀಡಿದ ತೀರ್ಪು. ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಯಾನ್ ಪರಾಗ್ 7ನೇ ಓವರ್ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದರು.ಇತ್ತ ಅಂಪೈರ್ ಔಟ್ ನೀಡುತ್ತಿದ್ದಂತೆ ರಿಯಾನ್ ಪರಾಗ್ ರಿವ್ಯೂ ಮೊರೆ ಹೋದರು. ರಿವ್ಯೂ ಪರಿಶೀಲಿಸಿದಾಗ ಚೆಂಡು ರಿಯಾನ್ ಅವರ ಬ್ಯಾಟ್ ಅನ್ನು ಸವರಿ ವಿಕೆಟ್ ಕೀಪರ್ ಕೈ ಸೇರಿರುವುದು ಕಾಣಿಸಿತು. ಹೀಗಾಗಿ ಮೂರನೇ ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು.ಆದರೆ ಟಿವಿ ಅಂಪೈರ್ ತೀರ್ಪಿಗೆ ರಿಯಾನ್ ಪರಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆಂಡು ನನ್ನ ಬ್ಯಾಟ್ಗೆ ತಾಗಿಲ್ಲ. ಬ್ಯಾಟ್ ಮೈದಾನಕ್ಕೆ ಬಡಿದಿದ್ದರಿಂದ ಅಲ್ಟ್ರಾಎಡ್ಜ್ ಮೀಟರ್ನಲ್ಲಿ ಸ್ಪೈಕ್ ಕಾಣಿಸಿಕೊಂಡಿದೆ ಎಂಬ ವಾದವನ್ನು ರಿಯಾನ್ ಪರಾಗ್ ಫೀಲ್ಡ್ ಅಂಪೈರ್ ಮುಂದಿಟ್ಟಿದ್ದಾರೆ. ಆದರ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ತೀರ್ಪನ್ನು ಎತ್ತಿ ಹಿಡಿದದ್ದು, ಹೀಗಾಗಿ ಮೈದಾನದಿಂದ ತೆರಳುವಂತೆ ಸೂಚಿಸಿದ್ದಾರೆ.
ಇದರಿಂದ ಕೋಪಗೊಂಡ ರಿಯಾನ್ ಪರಾಗ್ ಸಿಟ್ಟಿನಿಂದಲೇ ಮೈದಾನದ ತೊರೆದಿದ್ದಾರೆ. ಇದೀಗ ಮೂರನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಅದು ಕ್ಲಿಯರ್ ಔಟ್ ಎಂದರೆ, ಇನ್ನೂ ಕೆಲವರು ನಾಟೌಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.ಒಟ್ಟಿನಲ್ಲಿ ಈ ಪಂದ್ಯದಲ್ಲಿ 14 ಎಸೆತಗಳನ್ನು ಎದುರಿಸಿ 3 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 26 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ರಿಯಾನ್ ಪರಾಗ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು, ಈ ಮೂಲಕ ಎರಡಂಕಿ ಮೊತ್ತದೊಂದಿಗೆ ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ (82) ಭರ್ಜರಿ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿತು.