ಇತ್ತೀಚಿನ ಸುದ್ದಿರಾಜ್ಯ

ಮಲೆ ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪೂರ್ವ ಸಿದ್ದತೆ : ಜಿಲ್ಲಾಧಿಕಾರಿಗಳು ಶಾಸಕರಿಂದ ಪರಿಶೀಲನಾ ಸಭೆ

ಚಾಮರಾಜನಗರ :ಪ್ರಸಿದ್ದ ಯಾತ್ರಾ ಕ್ಷೇತ್ರ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ 7ರಿಂದ ಪ್ರಾರಂಭವಾಗಲಿರುವ ಮಹಾಶಿವರಾತ್ರಿ ಹಾಗೂ ಏಪ್ರಿಲ್ 6 ರಿಂದ ಆರಂಭವಾಗಲಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಕೈಗೊಳ್ಳಲಾಗುತ್ತಿರುವ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಪರಿಶೀಲನಾ ಸಭೆ ನಡೆಸಿದರು.

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಾತ್ರಾ ಮಹೋತ್ಸವ ಸಂಬಂಧ ಪೂರ್ವ ಸಿದ್ದತಾ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಮಹಾಶಿವರಾತ್ರಿ ಜಾತ್ರೆಗೆ ಕ್ಷೇತ್ರಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಬರುವ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. 

  ಮಲೈ ಮಹದೇಶ್ವರ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಅವರು ವಿವರ ನೀಡಿ ಕಾವೇರಿ ನೀರು ಸರಬರಾಜು ಯೋಜನೆಯಿಂದ ನಿರ್ಮಿಸಿರುವ 90 ಲಕ್ಷ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಲ್ಲಿ ನೀರು ಶೇಖರಣೆ ಮಾಡಿ ನೀರು ಶುದ್ದೀಕರಣ ಘಟಕಕ್ಕೆ ನೀರು ಬಿಟ್ಟು ಶುದ್ದೀಕರಿಸಿ ಸರಬರಾಜು ಮಾಡಲು ಕ್ರಮವಹಿಸಲಾಗಿದೆ. 8 ಸ್ಥಳಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ನೀರು ಪೂರೈಸಲಾಗುತ್ತದೆ. ಪರ ಮಾಡುವ ಸ್ಥಳದಲ್ಲಿ ಟ್ಯಾಂಕರ್ ಮೂಲಕ ಶುದ್ದ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗುತ್ತಿದೆ. ಪಾದಯಾತ್ರೆಯಲ್ಲಿ ಬರುವ ಭಕ್ತಾಧಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು. 

  ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರಬೇಕು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ವ್ಯಾಪಕವಾಗಿ ಭಕ್ತಾಧಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸೂಚನೆ ನೀಡಿದರು.

 ಪಾದಯಾತ್ರೆ ಹಾಗೂ ವಾಹನಗಳ ಮುಖಾಂತರ ಬರುವ ಭಕ್ತಾಧಿಗಳನ್ನು ತಾಳಬೆಟ್ಟದಲ್ಲಿಯೇ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲು ಮನವರಿಕೆ ಮಾಡಿಕೊಡಲಾಗುತ್ತದೆ. ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ಹಾಕಲು ಕಸದ ಬುಟ್ಟಿಗಳನ್ನು ಇಡುವ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಗಳಿಗೆ ಹೆಚ್ಚು ಸಂಖ್ಯೆಯಲ್ಲಿ ನೀರಿನ ಟ್ಯಾಂಕ್‍ಗಳನ್ನು ಇಡಲು ಕ್ರಮವಹಿಸಲಾಗಿದೆ ಎಂದು ರಘು ಅವರು ಸಭೆಗೆ ಮಾಹಿತಿ ನೀಡಿದರು.

  ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಭಕ್ತಾಧಿಗಳಿಗೆ ನೆರಳಿನ ವ್ಯವಸ್ಥೆ ವ್ಯಾಪಕವಾಗಿ ಆಗಬೇಕಿದೆ. ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವ ಕಡೆ ನೆರಳಿಗೆ ಸೂಕ್ತ ಕ್ರಮವಹಿಸಬೇಕು. ಅಂತರಗಂಗೆ ಸ್ನಾನಘಟ್ಟದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಖಾಯಂ ಶೌಚಾಲಯಗಳ ಜೊತೆಗೆ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಸ್ನಾನಕ್ಕಾಗಿ ಷವರ್‍ಗಳನ್ನು ಅಳವಡಿಸಬೇಕು. ಸ್ನಾನ ಗೃಹ ಹಾಗೂ ಶೌಚಾಲಯಗಳ ನಿರಂತರ ಸ್ವಚ್ಚತೆಗೆ ಸಿಬ್ಬಂದಿ ನಿಯೋಜಿಸಬೇಕು ಎಂದು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದರು. 

 ಜಾತ್ರಾ ಸಂದರ್ಭದಲ್ಲಿ ನಿತ್ಯ ದಾಸೋಹದ ಜೊತೆಗೆ ವಿಶೇಷ ದಾಸೋಹ ಇರಬೇಕು. ಇದಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಬೇಕು. ಕೆ.ಎಸ್.ಆರ್.ಟಿಸಿ ವತಿಯಿಂದ ವಿವಿಧ ಭಾಗಗಳಿಂದ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳ ಕಾರ್ಯಾಚರಣೆಯಾಗಬೇಕು. ತಮಿಳುನಾಡಿನಿಂದಲೂ ಕ್ಷೇತ್ರಕ್ಕೆ ಬಸ್ಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಎಂದು ಸೂಚಿಸಲಾಯಿತು. 

  ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ, ಜಾತ್ರಾ ಆವರಣದಲ್ಲಿ ಸ್ವಚ್ಚತೆ, ವಿದ್ಯುತ್ ದೀಪಾಲಂಕಾರ, ಸಾಂಸ್ಕøತಿಕ  ಕಾರ್ಯಕ್ರಮಗಳ ಆಯೋಜನೆ, ನಿರಂತರ ವಿದ್ಯುತ್ ಪೂರೈಕೆ, ಭದ್ರತಾ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ವ್ಯವಸ್ಥೆಗಳ ಸಿದ್ದತೆಯನ್ನು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ವಿವರವಾಗಿ ಸಭೆಯಲ್ಲಿ ಪರಿಶೀಲಿಸಿದರು. 

  ಸಾಲೂರು ಶ್ರೀಗಳಾದ ಶಾಂತಮಲ್ಲಿಕಾರ್ಜುನ ಸ್ವಾಮಿಜೀ ಅವರು ಜಾತ್ರಾ ಸಂಬಂಧ ಅಗತ್ಯ ಸೂಚನೆ ಹಾಗೂ ಸಲಹೆ ನೀಡಿದರು. 

   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್‍ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಉಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button