‘ಮತ್ತೊಮ್ಮೆ ಮೋದಿ 2024’ ಗೋಡೆ ಬರಹ ಅಭಿಯಾನಕ್ಕೆ ಬಿಎಸ್ ಯಡಿಯೂರಪ್ಪ ಚಾಲನೆ
ಮೈಸೂರು, ಫೆ.8: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ಹಾಗೂ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕ ಹಿಡಿಯಲು ಬಿಜೆಪಿ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. ಮತ್ತೊಮ್ಮೆ ಮೋದಿ 2024 ಎಂಬ ಗೋಡೆ ಬರಹ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೈಸೂರಿನಲ್ಲಿ ಇಂದು ಚಾಲನೆ ನೀಡಿದರು. ಇನ್ನೊಂದೆಡೆ, ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದರು.
ಚಾಮರಾಜ ಕ್ಷೇತ್ರದ ಪಡುವಾರಹಳ್ಳಿಯಲ್ಲಿ ಮತ್ತೊಮ್ಮೆ ಮೋದಿ 2024 ಎಂಬ ಗೋಡೆ ಬರಹ ದೀಪಕ್ಕೆ ಬಣ ಹಚ್ಚುವ ಮೂಲಕ ಅಭಿಯಾನಕ್ಕೆ ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ಮಾಜಿ ಶಾಸಕರಾದ ಎಲ್ ನಾಗೇಂದ್ರ, ಎನ್ ಮಹೇಶ್, ರಾಜ್ಯ ಉಪಾಧ್ಯಕ್ಷ ಎಂ ರಾಜೇಂದ್ರ, ಬಿಜೆಪಿ ಮುಖಂಡ ಕವೀಶ್ ಗೌಡ ಸೇರಿದಂತೆ ಹಲವರು ಇದ್ದರು.
ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನ
ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ಆಯೋಜಿಸಲಾಗಿರುವ ಗ್ರಾಮ ಚಲೋ ಅಭಿಯಾನಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಚಾಲನೆ ನೀಡಿದರು. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಹೋಬಳಿಯ ಹೆಚ್. ಗೊಲ್ಲಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಈ ವೇಳೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಪಕ್ಷಕ್ಷೆ ಮರು ಸೇರ್ಪಡೆಯಾಗಿರುವ ಯಶವಂತಪುರ ಕ್ಷೇತ್ರದ ಬಿಜೆಪಿ ಮುಖಂಡ ಮಾರೇಗೌಡ ಭಾಗಿಯಾದರು. ಕಾರ್ಯಕ್ರಮದಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಗೈರಾಗಿದ್ದಾರೆ.