ಭ್ರೂಣ ಹತ್ಯೆ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ನಿಗಾ ಮದ್ದೂರು ತಹಶೀಲ್ದಾರ್ ಸೋಮಶೇಖರ್
ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ನಿಗಾ ಇಡಲಾಗಿದೆ ಎಂದು ನೂತನ ತಹಶೀಲ್ದಾರ್ ಸೋಮಶೇಖರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿನ ಸಭಾಂಗಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಈ ಬಗ್ಗೆ ತಿಳಿಸಿದ ಅವರು, ಪಟ್ಟಣದಲ್ಲಿರುವ 3 ಹಾಗೂ ಭಾರತಿನಗರದ 1 ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದೇ ಲಿಂಗ ಪತ್ತೆಯಂತಹ ಕಾನೂನು ಬಾಹಿರ ಕೆಲಸಗಳನ್ನು ನಡೆಸದಂತೆ ಎಚ್ಚರಿಸಿ ಅರಿವು ಮೂಡಿಸುವ ಮೂಲಕ ನಿರ್ದೇಶನ ನೀಡಲಾಗಿದೆ ಎಂದರು.
ನಂತರ ಮಾತನಾಡಿದ ಅವರು ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಈ ಬಗ್ಗೆ ಸಿಬ್ಬಂದಿಗಳಿಗೆ ಸಕಾಲ ದಂತೆ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯಬೇಕೆಂದು ತಾಕೀತು ಮಾಡಿದ್ದೇನೆ ಎಂದರು.
ತಾಲ್ಲೂಕು ವ್ಯಾಪ್ತಿಯಲ್ಲಿನ ಕೆಲವೆಡೆ ಅದರಲ್ಲೂ ಕೆರೆಗಳ ಸಮೀಪ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ತಾಲ್ಲೂಕು ಭೂ ಮಾಪಕರು ಇಬ್ಬರೇ ಇರುವುದರಿಂದ ಸಮಸ್ಯೆಯಾಗುತ್ತಿದ್ದು ಮತ್ತಷ್ಟು ಭೂ ಮಾಪಕರು ( ಸರ್ವೇಯರ್ ) ರನ್ನು ನೀಡುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಬೆಂಗಳೂರು – ಮೈಸೂರು ಹೆದ್ದಾರಿ ಆಗಲೀಕರಣ ಕಾಮಗಾರಿಯ ವೇಳೆ ಮದ್ದೂರು ಪಟ್ಟಣದ ವ್ಯಾಪ್ತಿಯಲ್ಲಿ ಕಾಮಗಾರಿಯು ಅಪೂರ್ಣಗೊಂಡಿದ್ದು ಇದನ್ನು ಖುದ್ಧು ಜಿಲ್ಲಾಧಿಕಾರಿಕಾರಿಗಳೇ ಬಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೂ ಆಗಿಲ್ಲವೇಕೆ? ಎಂಬ ಸುದ್ಧಿಗಾರರ ಪ್ರಶ್ನೆಗೆ ಕೂಡಲೇ ಈ ಬಗ್ಗೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕಂಪನಿಯ ಅಧಿಕಾರಿಗಳನ್ನು ಕರೆಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮವಹಿಸಲಾಗುವುದು ಎಂದರು.
ಹಳೆಯದಾದ ತಾಲ್ಲೂಕು ಕಚೇರಿಯ ನವೀಕರಣಕ್ಕೆ ಹಾಗೂ ಶೌಚಾಲಯಗಳ ದುರಸ್ಥಿಗೆ ಗಮನನೀಡಲಾಗಿದೆ ಎಂದರು.
ಈ ವೇಳೆ ಶಿರಸ್ತೇದಾರ್ ಚಂದ್ರಶೇಖರ್, ರಾಜಸ್ವ ನಿರೀಕ್ಷಕ ಜಗದೀಶ್, ನವೀನ್ ಕುಮಾರ್ ಇದ್ದರು.